Header Ads
Header Ads
Breaking News

ಗಂಗೊಳ್ಳಿ ಗ್ರಾಮ ಪಂಚಾಯತ್ ಗ್ರಾಮಸಭೆ

ಕುಂದಾಪುರ: ಜನರಿಲ್ಲದೆ ಖಾಲಿ ಕುರ್ಚಿಗಳು ರಾರಾಜಿಸುತ್ತಿವೆ. ಕಳೆದ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ ಆಗಿಲ್ಲ. ಜನರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳು ಗ್ರಾಮಸಭೆಗೆ ಬರುತ್ತಿಲ್ಲ. ಇಷ್ಟೆಲ್ಲಾ ಇರುವಾಗ ಹೇಗೆ ಸಭೆ ನಡೆಸುತ್ತೀರಿ. ಆಡಳಿತಾಧಿಕಾರಿಗಳೇ.. ಗ್ರಾಮಸಭೆ ಎಂದರೇನು. ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟು ಸಭೆ ಮುಂದುವರಿಸಿ.

ಇದು ಶನಿವಾರ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ೨೦೧೮-೧೯ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶದ ಪರಿ.

ಗ್ರಾಮಸಭೆ ನಡೆಸದೆ ಬರೋಬ್ಬರಿ ಒಂದು ವರ್ಷವಾಗಿದ್ದು, ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ. ಜನರ ಸಮಸ್ಯೆಗಳಿಗೆ ಪಂಚಾಯತ್ ಇದುವರೆಗೂ ಸ್ಪಂದಿಸಿಲ್ಲ. ಹೀಗಾಗಿಯೇ ಜನರು ಗ್ರಾಮಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಗಂಗೊಳ್ಳಿ ಗ್ರಾಮದ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವ ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಕಾಟಾಚಾರಕ್ಕೆ ಗ್ರಾಮಸಭೆ ನಡೆಸುವುದಾದರೆ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಆಕ್ಷೇಪಗಳಿಗೆ ಉತ್ತರಿಸಿದ ಮಾರ್ಗದರ್ಶಿ ಅಧಿಕಾರಿ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮಸಭೆ ಅತ್ಯಂತ ಮಹತ್ವದ್ದಾಗಿದೆ. ಗ್ರಾಮಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಇದರ ಅನುಷ್ಠಾನದ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಗ್ರಾಮ ಮಟ್ಟದ ಅಧಿಕಾರಿಗಳು ಗ್ರಾಮಸಭೆಗೆ ಖಡ್ಡಾಯವಾಗಿ ಭಾಗವಹಿಸಬೇಕಿದ್ದು, ಸಭೆಗೆ ಹಾಜರಾಗದ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು. ಗ್ರಾಮಸ್ಥರು ಗ್ರಾಮಸಭೆಯನ್ನು ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಬಳಿಕ ಆರಂಭಗೊಂಡ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ವೈದ್ಯಾಧಿಕಾರಿಗಳ ಅಲಭ್ಯತೆಯಿಂದ ಜನರು ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಖಾಲಿ ಇರುವ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ಹೆಚ್ಚುವರಿ ವೈದ್ಯಾಧಿಕಾರಿಗಳನ್ನು ಆಸ್ಪತ್ರೆಗೆ ನೇಮಿಸುವಂತೆ ಮನವಿ ಮಾಡಿದರೂ ಈವರೆಗೆ ಸ್ಪಂದನೆ ದೊರೆತಿಲ್ಲ. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ತುರ್ತು ಚಿಕಿತ್ಸೆಗೆ ಅವಕಾಶವಿಲ್ಲದ ಆರೋಗ್ಯ ಕೇಂದ್ರ ನಮಗೆ ಬೇಡ, ಮುಚ್ಚಿಬಿಡಿ
ಎಂಬ ಕೂಗುಗಳು ಸಭೆಯಲ್ಲಿ ಕೇಳಿಬಂದಿದ್ದು, ಸರಕಾರಿ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರ ಮತ್ತು ಹಿರಿಯ ಅಧಿಕಾರಿಗಳ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಡ ಹೇರಲು ಪ್ರಯತ್ನಿಸಿದ್ದೀರಾ ಎಂದು ಗ್ರಾಮಸ್ಥ ನವೀನ್ ಜಿ.ಪಂ, ತಾ.ಪಂ ಸದಸ್ಯರನ್ನು ಪ್ರಶ್ನಿಸಿದರು.

ಗಂಗೊಳ್ಳಿ ಗ್ರಾಮದ ಕೆರೆ ಹಾಗೂ ಸರಕಾರಿ ಭೂಮಿ ಒತ್ತುವರಿ ಪ್ರಕರಣ ಸಭೆಯಲ್ಲಿ ಪ್ರತಿಧ್ವನಿಸಿತು. ಕೆರೆ ಹಾಗೂ ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸುವಂತೆ ಮತ್ತು ಬಂದರು ಚೋಳ ಕೆರೆ ಸಮೀಪ ನಿರ್ಮಿಸಲಾಗಿರುವ ರಸ್ತೆಯನ್ನು ತೆರವುಗೊಳಿಸಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ರಸ್ತೆಗಳಿಗೆ ತಾಗಿಕೊಂಡಿರುವ ಕೆರೆಗಳ ಸುತ್ತಲೂ ಬೇಲಿ ಅಳವಡಿಸಬೇಕೆಂದು ಸ್ಥಳೀಯಾಡಳಿತವನ್ನು ಒತ್ತಾಯಿಸಿದರೂ ಸ್ಥಳೀಯಾಡಳಿತ ಬೇಲಿ ಹಾಕಲಿ ಹಿಂದೇಟು ಹಾಕುತ್ತಿದೆ. ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರಿ ಭೂಮಿ ಉಳ್ಳವರ ಪಾಲಾಗುತ್ತಿದೆ. ಆದ್ದರಿಂದ ಕೂಡಲೇ ಕ್ರಮಕೈಗೊಳ್ಳುವಂತೆ ಜನರು ಆಗ್ರಹಿಸಿದರು.

ಹಿಂದೂ ರುದ್ರಭೂಮಿ ಅವ್ಯವಸ್ಥೆ:
ಗಂಗೊಳ್ಳಿ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿಗಳ ಅವ್ಯವಸ್ಥೆ ಬಗ್ಗೆ ಮಾತನಾಡಿದ ಗ್ರಾಮಸ್ಥ ನವೀನ್ ದೊಡ್ಡಹಿತ್ಲು, ಹಿಂದೂ ರುದ್ರಭೂಮಿಗಳ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದೆ. ರುದ್ರಭೂಮಿಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ದುರಸ್ಥಿ ಮಾಡುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದರೂ ಇನ್ನು ದುರಸ್ಥಿಯಾಗಿಲ್ಲ. ಸ್ಥಳೀಯಾಡಳಿತ ಜಿಲ್ಲಾಧಿಕಾರಿಯವರ ವಿಶೇಷ ನಿಧಿಯನ್ನು ಬಳಸಿಕೊಂಡು ಸಾರ್ವಜನಿಕ ಹಿಂದು ರುದ್ರಭೂಮಿಗಳ ದುರಸ್ಥಿ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ರಾತ್ರಿ ವೇಳೆ ಬಸ್ ಸಂಚಾರ ಇಲ್ಲ:
ಸಂಜೆ ೭ ಗಂಟೆ ಬಳಿಕ ಕುಂದಾಪುರಕ್ಕೆ ಯಾವುದೇ ಖಾಸಗಿ ಬಸ್ಸುಗಳು ಸಂಚರಿಸುತ್ತಿಲ್ಲ. ಪರವಾನಿಗೆ ಇದ್ದೂ ಸಂಜೆ ಬಳಿಕ ಕುಂದಾಪುರಕ್ಕೆ ಸಂಚರಿಸದ ಖಾಸಗಿ ಬಸ್ಸುಗಳ ಪರ್ಮಿಟ್ ರದ್ದುಪಡಿಸಬೇಕೆಂದು ಈ ಬಗ್ಗೆ ಹಿಂದಿನ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆರ್‌ಟಿಒ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕೆಂದು ನಿರ್ಣಯಿಸಲಾಯಿತು.

ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಾಣ, ಗಂಗೊಳ್ಳಿ ಗ್ರಾಮ ಪಂಚಾಯತ್‌ನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸುವ ಕುರಿತು, ಬಂದರು ಇಲಾಖೆ ವ್ಯಾಪ್ತಿಯ ಮ್ಯಾಂಗನೀಸ್ ರಸ್ತೆಯ ಚರಂಡಿ ಅವ್ಯವಸ್ಥೆ, ಗಂಗೊಳ್ಳಿಯಿಂದ ಕುಂದಾಪುರಕ್ಕೆ ಹೊಳೆ ಮೂಲಕ ಹೋಗಲು ಬಾರ್ಜ್ ವ್ಯವಸ್ಥೆ ಕಲ್ಪಿಸುವ, ಎಸ್‌ಎಲ್‌ಆರ್‌ಎಂ ಕೇಂದ್ರದ ನಿರ್ಮಾಣ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ, ಗಂಗೊಳ್ಳಿ ಗ್ರಾಮದ ವಿವಿಧೆಡೆ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಗಳ ಕಳಪೆ ಕಾಮಗಾರಿ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅವ್ಯವಸ್ಥೆ ಹಾಗೂ ಅಭಿವೃದ್ಧಿ ವಿಷಯ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಬಗ್ಗೆ ಗ್ರಾಮಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಸೂಕ್ತ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಚಂದ್ರಶೇಖರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಸದಸ್ಯರಾದ ಶ್ರೀನಿವಾಸ ಖಾರ್ವಿ, ನಾಗರಾಜ ಖಾರ್ವಿ, ಜಯಂತಿ ಖಾರ್ವಿ, ಸರೋಜಿನಿ ಕೋಡಿಕಾರ್, ಜಿ.ಚೆಂದು, ಮಂಜುಳಾ ದೇವಾಡಿಗ, ಸುಶೀಲ ಶೇರುಗಾರ್, ಶಾರದಾ ಶೇರುಗಾರ್, ಯೂನಿಸ್ ಸಾಹೇಬ್. ಲಕ್ಷ್ಮೀಕಾಂತ ಮಡಿವಾಳ, ಗೀತಾ, ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಎಎಸ್ಸೈ ವೆಂಕಟೇಶ ಗೊಲ್ಲ, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ವಿಶ್ವನಾಥ, ಮೀನುಗಾರಿಕಾ ಇಲಾಖೆಯ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಶ್ರೀಕಾಂತ್ ಹೆಮ್ಮಾಡಿ ಕುಂದಾಪುರ

Related posts

Leave a Reply