ಮಂಜೇಶ್ವರ : ಮಂಜೇಶ್ವರದ ಗಡಿ ಪ್ರದೇಶದ ತಲಪಾಡಿಯಲ್ಲಿ ತಲೆ ಎತ್ತಿರುವ ಟೋಲ್ ಗೇಟ್ ನಲ್ಲಿ ಗಡಿಪ್ರದೇಶದ ಐದು ಕಿಲೋ ಮೀಟರ್ ಸುತ್ತಳತೆಯ ವ್ಯಾಪ್ತಿಯಲ್ಲಿ ಕೇರಳ ಕರ್ನಾಟಕದ ಗಡಿ ಪ್ರದೇಶದ ಜನತೆಗೆ ಉಚಿತ ಪ್ರಯಾಣದ ಭರವಸೆಯನ್ನು ನೀಡಲಾಗಿತ್ತು. ಆರಂಭದಲ್ಲಿ ಮಂಜೇಶ್ವರ ಹಾಗು ತಲಪಾಡಿಯ ಉಭಯ ರಾಜ್ಯದ ಗಡಿನಾಡ ಜನತೆಗೆ ಇದರ ಪ್ರಯೋಜನ ಕೂಡಾ ಲಭಿಸಿತ್ತು. ಆದರೆ ಬಳಿಕ ಹಂತ ಹಂತವಾಗಿ ಗಡಿನಾಡ ಜನತೆಯ ಉಚಿತ ಪ್ರಯಾಣದ ಬಗ್ಗೆ ಕಿರುಕುಳವನ್ನು ನೀಡಲು ಆರಂಭಿಸಿರುವ ಟೋಲ್ ಅಧಿಕೃತರು ಲಾಕ್ ಡೌನ್ ಗಿಂತ ಅಲ್ಪ ಮುಂಚೆ ಮಂಜೇಶ್ವರ ಭಾಗದವರಿಗೆ ಉಚಿತ ಪ್ರವೇಶವನ್ನು ರದ್ದುಗೊಳಿಸಿ ಕೇವಲ ತಲಪಾಡಿ ಪಂ. ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿರುವುದು ಕೇರಳ ವ್ಯಾಪ್ತಿಯಲ್ಲಿರುವ ಗಡಿನಾಡ ಜನತೆಯನ್ನು ಕೆರಳಿಸುವಂತಾಗಿತ್ತು. ಬಳಿಕ ಹಲವು ಪ್ರತಿಭಟನೆಗಳು ನಡೆದಿದ್ದರೂ ಯಾವುದೂ ಫಲಪ್ರದವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಸ್ಪರ್ಧಾಕಣದಲ್ಲಿರುವ ಮೂವರು ಅಭ್ಯರ್ಥಿಗಳಿಗೂ ಸವಾಲನ್ನು ಹಾಕಿ ಕೊಂಡು ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರ ಎಂಬ ಹೆಸರಿನಲ್ಲಿ ತಲೆ ಎತ್ತಿರುವ ಫ್ಲೆಕ್ಸ್ ಬೋರ್ಡ್ ಇದೀಗ ವೈರಲಾಗುತ್ತಿದೆ. ತಲಪಾಡಿ ಗ್ರಾಮದ ಜನರಿಗೆ ಟೋಲ್ ಗೇಟ್ ನಲ್ಲಿ ಉಚಿತವಾಗಿ ಸಂಚರಿಸಬಹುದಾದರೆ ಮಂಜೇಶ್ವರದ ಗಡಿ ನಾಡ ಜನತೆಗೆ ಯಾಕಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವನೆಂಬ ವಾಗ್ದಾನ ನೀಡುವವರಿಗೆ ನಮ್ಮ ಮತ ಎಂಬುದಾಗಿ ಮುದ್ರಿಸಿ ಫ್ಲೆಕ್ಸ್ ಹಾಕಲಾಗಿದೆ. ಗಡಿನಾಡ ಜನತೆಯ ಬೇಡಿಕೆಗೆ ಅಭ್ಯರ್ಥಿಗಳ ಭಾಗದಿಂದ ಯಾವುದಾದರೂ ಸ್ಪಂಧನೆ ಇರಬಹುದೇ ಎಂದು ಕಾದು ನೋಡಬೇಕಾಗಿದೆ.