Header Ads
Header Ads
Header Ads
Breaking News

ಗದ್ದಲದ ಗೂಡಾಯಿತು ಸುಳ್ಯ ನಗರ ಪಂಚಾಯತ್ ಸಭೆ

ಸುಳ್ಯ ನಗರ ಪಂಚಾಯತ್‌ನ ಸಾಮಾನ್ಯ ಸಭೆಯು ಆಡಳಿತ ಮತ್ತು ವಿಪಕ್ಷದ ನಡುವೆ ಹಾಗೂ ಆಡಳಿತ ಪಕ್ಷದ ಸದಸ್ಯರೊಳಗೆ ಮಾತಿನ ಚಕಮಕಿಗೆ ಕಾರಣವಾಗಿ ಇಡೀ ಸಭೆ ಹಲವು ಬಾರಿ ಗದ್ದಲದ ಗೂಡಾಗಿ ಪರಿಣಮಿಸಿತು.


ನಗರ ಪಂಚಾಯತ್ ಅದ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಹುದ್ದೆಯ ಬಗೆಗೆ ಚರ್ಚೆ ನಡೆಯಿತು. ಆ.29 ರಂದು ಸಭೆ ನಡೆದಿರುವುದಾಗಿ ಪತ್ರಿಕೆಗಳಲ್ಲಿ ಬಂದಿದೆ. ಈ ಸಭೆಗೆ ನೋಟೀಸು ಮಾಡಿದವರು ಯಾರು? ಯಾವ ಮುಖ್ಯಾಧಿಕಾರಿ ಸಹಿ ಹಾಕಿದ್ದಾರೆ ಎಂದು ಪ್ರಶ್ನಿಸುತ್ತಿದ್ದಂತೆ ಎದ್ದು ನಿಂತ ಪ್ರಕಾಶ್ ಹೆಗ್ಡೆ ಯವರು ಈ ಮುಖ್ಯಾಧಿಕಾರಿ ಕೂಡ ಇಲ್ಲಿ ತುಂಬಾ ದಿನ ಇರುವುದಿಲ್ಲ. ಅವರು ೨ ಲಕ್ಷ ಕೊಟ್ಟು ಇಲ್ಲಿಗೆ ಬಂದಿದ್ದಾರೆ. ಅಂತಹ ಕೆಟ್ಟ ಸರಕಾರ ರಾಜ್ಯದಲ್ಲಿದೆ ಎಂದರು. ಈ ಮಾತು ಕೇಳುತ್ತಿದಂತೆ ವಿಪಕ್ಷ ಸದಸ್ಯರೆಲ್ಲ ಒಮ್ಮೆಲೆ ಮೇಜು ಬಡಿಯುತ್ತಾ ಎದ್ದು ನಿಂತು ಅರ್ಭಟಿಸತೊಡಗಿದರು. ಒಂದೆಡೆ ವಿಪಕ್ಷ ಸದಸ್ಯರು ಒಟ್ಟಾಗಿ ಪ್ರಕಾಶ್ ಹೆಗ್ಡೆ ವಿರುದ್ಧ ಮಾತನಾಡತೊಡಗಿದರೆ ಇತ್ತ ಹೆಗ್ಡೆಯವರು ಏಕಾಂಗಿಯಾಗಿ ವಾಗ್ದಾಳಿ ನಡೆಸತೊಡಗಿದರು. ಆಡಳಿತ ಪಕ್ಷದ ಯಾವುದೇ ಸದಸ್ಯರು ಅವರನ್ನು ಬೆಂಬಲಿಸಿ ಮಾತನಾಡದೆ ಇರುವುದು ಎದ್ದು ಕಂಡಿತು. ಹೆಗ್ಡೆಯವರು ತನ್ನ ಮಾತನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸತೊಡಗಿದ ವಿಪಕ್ಷ ಸದಸ್ಯರು ತಮ್ಮ ಸ್ಥಾನದಿಂದ ಎದ್ದು ಬಂದು ವೇದಿಕೆಯ ಮುಂಭಾಗದಲ್ಲಿ ಧರಣಿ ಕುಳಿತರು. ಆಗ ಆಡಳಿತ ಪಕ್ಷದ ಸದಸ್ಯ ರಮಾನಂದ ರೈ ಧರಣಿ ನಿರತರಲ್ಲಿಗೆ ಹೋಗಿ ಸಮಾಧಾನಿಸತೊಡಗಿದರು. ಪ್ರಕಾಶ್ ಹೆಗ್ಡೆ ಯವರು ಪಟ್ಟು ಬಿಡದೆ ತಮ್ಮ ಮಾತನ್ನು ಸಮರ್ಥಿಸತೊಡಗಿದರು. ಕೊನೆಗೆ ಅಧ್ಯಕ್ಷೆ ಶೀಲಾವತಿ ಯವರೇ ವೇದಿಕೆಯಿಂದ ಇಳಿದು ಬಂದು ವಿಪಕ್ಷದವರ ಮನವೊಲಿಸಿದ ನಂತರ ಅವರು ಸ್ವಸ್ಥಾನಕ್ಕೆ ಮರಳಿದರು. ನಂತರ ಮಾತನಾಡಿದ ಅಧಯಕ್ಷೆ ಸಭೆ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ವೈಯಕ್ತಿಕ ವಿಚಾರ ಇಟ್ಟುಕೊಂಡು ಚರ್ಚೆ ನಡೆಸಬಾರದು ಎಂದರು. ನ.ಪಂ. ಸಭೆಯಲ್ಲಿ ಸರಕಾರಗಳನ್ನು ಎಳೆದು ತರುವುದು ಸರಿಯಲ್ಲ. ದ್ವೇಷ ಇದ್ದರೆ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರೇಮಾ ಟೀಚರ್ ಹೇಳಿದರು.
ಈ ಕುರಿತಂತೆ ಚರ್ಚೆ ಆರಂಭಗೊಂಡಾಗ ಎದ್ದು ನಿಂತ ಆಡಳಿತ ಪಕ್ಷದ ಸದಸ್ಯ ಎನ್.ಎ. ರಾಮಚಂದ್ರ ರವರು ಅಜೆಂಡಾ ಪ್ರಕಾರದಂತೆ ಸಭೆ ನಡೆಸೋಣ. ಆ ವಿಚಾರ ಬಳಿಕ ಮಾತನಾಡೋಣ ಎಂದು ಹೇಳಿದರು. ವಿಪಕ್ಷ ಸದಸ್ಯರಾದ ಗೋಕುಲ್‌ದಾಸ್, ಕೆ.ಎಸ್. ಉಮ್ಮರ್ , ಮೊದಲಾದವರು ಇದಕ್ಕೆ ಸಹಮತ ವ್ಯಕ್ತ ಪಡಿಸಿದರು. ಎನ್.ಎ. ಅವರ ಆಕ್ಷೇಪದಿಂದ ಕೆರಳಿದ ಪ್ರಕಾಶ್ ಹೆಗ್ಡೆ ಅವರು ನಮ್ಮ ವಾರ್ಡ್‌ನ ಸಮಸ್ಯೆ ಇದು. ಗಂಭೀರ ವಿಚಾರವಾದುದರಿಂದ ಚರ್ಚೆ ನಡೆಸಲೇಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಎನ್.ಎ ಮತ್ತು ಪ್ರಕಾಶ್ ಹೆಗ್ಡೆ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಸ್ಪರರು ನೀವು ಕುಳಿತುಕೊಳ್ಳಿ, ನೀವು ಇದರಲ್ಲಿ ಶಾಮೀಲಾಗಿದ್ದೀರಿ ಎಂದು ಹೇಳತೊಡಗಿದರು. ಗದ್ದಲದಲ್ಲಿ ಯಾರೂ ಏನೂ ಮಾತನ್ನಾಡುತ್ತಿದ್ದಾರೆ ಎಂದೇ ತಿಳಿಯದಂತಾಯಿತು. ನೀವು ಆಡಳಿದವರೇ ಹೀಗೆ ಕಚ್ಚಾಡಿಕೊಂಡರೆ ಹೇಗೆ ಎಂದು ಕೆ.ಎಂ.ಮುಸ್ತಾಫ, ಪ್ರೇಮಾ ಟೀಚರ್ ಕೇಳಿದರು. ಮತ್ತೊಂದೆಡೆ ಯಾರು ಯಾವಾಗ ಆಕ್ಷೇಪ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಚರ್ಚೆ ನಡೆಯಿತು. ಅಜೆಂಡಾ ತಯಾರಿಸುವ ವೇಳೆಗೆ ಈ ಆಕ್ಷೇಪಣೆ ಬಂದಿರಲಿಲ್ಲ ಎಂದು ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ತಿಳಿಸಿದರು.
ಆಶ್ರಯ ಮನೆಗಳಿಗೆ ಅನುಮತಿ ಪತ್ರ ನೀಡಲಾಗಿದೆ. ಆದರೆ ಸೈಟ್ ಕ್ಲಿಯರೆನ್ಸ್ ಮಾಡಿಲ್ಲ. ಇದಕ್ಕೆ ಯಾರು ಹೊಣೆ ಎಂದು ಎನ್. ಎ ರಾಮಚಂದ್ರ ಪ್ರಶ್ನಿಸಿದರು. ನ.ಪಂ. ಸಿಬ್ಬಂದಿ ಜಯಲಕ್ಷ್ಮೀ ಯವರು ನೀಡಿದ ಉತ್ತರದಿಂದ ತೃಪ್ತರಾಗದ ಅವರು ಈ ಬಗ್ಗೆ ಸ್ಪಷ್ಟ ಉತ್ತರ ಬೇಕು. ಇಂತಿಷ್ಟು ದಿನಗಳೊಳಗೆ ಸೈಟ್ ಕ್ಲಿಯರ್ ಮಾಡಿ ಹೇಳಬೇಕು ಎಂದು ಹೇಳಿದರು. ಆ ಜಾಗ ಮನೆ ಕಟ್ಟಲು ಯೋಗ್ಯವಾದ ಜಾಗವೂ ಅಲ್ಲ ಎಂದು ಎನ್.ಎ. ಹೇಳಿದಾಗ ಇಂಜಿನಿಯರ್ ಶಿವಕುಮಾರ್ ತಲೆಯಾಡಿಸಿದರು. ಇದು ಪ್ರಕಾಶ್ ಹೆಗ್ಡೆ ಯವರನ್ನು ಕೆರಳಿಸಿತು. ನೀವು ಹೀಗೆ ಮಾತನ್ನಾಡಿದರೆ ನೀವೇ ಜವಾಬ್ದಾರಿಯಾಗುತ್ತೀರಿ ಹಾಗೆಂದು ನಿರ್ಣಯ ಮಾಡಿ ಎಂದು ಹೆಗ್ಡೆ ಯವರು ಹೇಳಿದಾಗ, ಯಾರ ಅವಧಿಯಲ್ಲಿ ಇದನ್ನು ನೀಡಲಾಗಿದೆ ಎಂದು ನಿರ್ಣಯ ಮಾಡಿ ಎಂದು ಎನ್. ಎ ಹೇಳಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಮುಖ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳು, ಸದಸ್ಯರು ಭಾಗವಹಿಸಿದರು.

Related posts

Leave a Reply