Breaking News

ಗದ್ದಲ ಪ್ರತಿಭಟನೆಯ ನಡುವೆ ಮಂಗಳೂರು ಪುರಭವನ ದರ ಇಳಿಕೆ,  ಕಲಾವಿದರ ಪರ ನಿಂತ ಮೇಯರ್ ಕವಿತಾ ಸನಿಲ್

ಪುರಭವನದ ಮುಂಗಡ ಹಾಗೂ ಬಾಡಿಗೆ ದರವನ್ನು ಶೇ. ೫೦ರಷ್ಟು ಕಡಿತಗೊಳಿಸುವ ಮೂಲಕ ಮೇಯರ್ ಕವಿತಾ ಸನೀಲ್ ಮಹತ್ವದ ನಿರ್ಧಾರವೊಂದನ್ನು ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿದರು. ಆಡಳಿತ ಪಕ್ಷದ ಸದಸ್ಯರ ಗದ್ದಲ, ಪ್ರತಿಭಟನೆ ನಡುವೆಯೂ ಮೇಯರ್ ಕವಿತಾ ಸನೀಲ್ ಕಲಾವಿದರ ಪರವಾಗಿ ನಿಂತದ್ದು ಶ್ಲಾಘನೆಯಾಗುತ್ತಿದೆ.
ಪುರಭವನದ ಪರಿಷ್ಕೃತ ಬಾಡಿಗೆ ದರ ಜುಲೈ ೧ರಿಂದ ಜಾರಿಗೆ ಬರಲಿದೆ. ಮೇಯರ್ ರವರದ್ದು ಏಕಪಕ್ಷೀಯ ನಿರ್ಧಾರ, ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಎದುರು ವಿಷಯ ತಂದು ಚರ್ಚಿಸಿ ದರ ಪರಿಷ್ಕರಣೆ ಮಾಡಬೇಕಿತ್ತು ಎಂಬ ಆಗ್ರಹ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪ್ರತಿಭಾ ಕುಳಾಯಿ ಅವರದ್ದಾಗಿತ್ತು. ನಿಯಮದ ಪ್ರಕಾರ ಹೀಗೆಯೇ ಆಗಬೇಕು. ಆದರೆ ಮೇಯರ್ ತಾನೇಕೆ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂಬದರ ಬಗ್ಗೆಯೂ ಸಭೆಯಲ್ಲಿ ಉತ್ತರ ನೀಡಿದ್ದಾರೆ. ಅವರು ಕೊಟ್ಟ ಉತ್ತರ ಸಮಂಜಸವಾಗಿಯೇ ಇದೆ ಎಂಬುದು ಕಲಾವಿದರ ಅಭಿಪ್ರಾಯ. ಸ್ಥಾಯಿ ಸಮಿತಿಯ ಟೇಬಲ್‌ಗೆ ಹೋದರೆ ಮತ್ತೈದು ತಿಂಗಳು ಕಳೆಯುತ್ತದೆ. ಐದು ತಿಂಗಳು ಎಂದರೆ ಮಳೆಗಾಲದಲ್ಲಿ ಪುರಭವನ ಬಾಡಿಗೆ ಪಡೆದು ತಮ್ಮ ಕಲಾವಂತಿಕೆ ಪ್ರದರ್ಶಿಸಿ ಜೀವನ ಹೊರೆಯುವ ಕಲಾವಿದ ತರ್ತು ಆವಶ್ಯಕತೆ ಪೂರೈಕೆ ಆಗುತ್ತಿರಲಿಲ್ಲ. ಆಡಳಿತದ ಒಳಗಿನ ಗದ್ದಲ, ಗಲಾಟೆ ರಾಜಕೀಯ ಏನೇ ಇರಲಿ, ನಮಗಂತೂ ಕಡಿಮೆ ಬಾಡಿಗೆಯಲ್ಲಿ ಪುರಭನವನ ದೊರೆಯುವಂತಾಯಿತಲ್ಲ ಎಂಬುದು ಕಲಾವಿದರ ಸಮಾಧಾನ.
ಹಾಗೆಂದು ಕಲಾವಿದ ಎಲ್ಲ ಬೇಡಿಕೆಗಳೂ ಈಡೇರಿವೆ ಎಂದುಕೊಳ್ಳಬೇಕಾಗಿಲ್ಲ. ಕಲಾವಿದರ ಒಕ್ಕೂಟ ಮತ್ತೊಮ್ಮೆ ಮೇಯರ್ ಕವಿತಾ ಸನೀಲ್‌ರನ್ನು ಭೇಟಿಯಾಗಲಿದೆ. ಈಗ ಮಾಡಿದ ಕೆಲಸಕ್ಕೆ ಅಭಿನಂದನೆ ಸಲ್ಲಿಸುವುದು ಅವರ ಮುಖ್ಯ ಉದ್ದೇಶ, ಅದರ ಜೊತೆಯಲ್ಲಿಯೇ ಇನ್ನೊಂದಿಷ್ಟು ಬೇಡಿಕೆಗಳ ಪಟ್ಟಿಯನ್ನೂ ಇಡುವ ಸಾಧ್ಯತೆ ಇದೆ. ಪುರಭವನದಲ್ಲಿ ಈ ಹಿಂದೆ ಇದ್ದ ತಾತ್ಕಾಲಿಕ ಕ್ಯಾಂಟೀನ್ ಮತ್ತೆ ತೆರೆಯಬೇಕು. ಪುರಭವನದ ಆವರಣದಲ್ಲಿ ರಸ್ತೆಗೆ ಕಾಣುವಂತೆ ಒಂದು ಪ್ಲೆಕ್ಸ್ ಹಾಕಲು ಅನುಮತಿ ನೀಡಬೇಕು. ಮತ್ತು ಪುರಭವನದ ನೋಟಿಸ್ ಬೋರ್ಡ್‌ನಲ್ಲಿ ಮುಂದೆ ನಡೆಯಬಹುದಾದ ಕಾರ್ಯಕ್ರಮಗಳ ಮಾಹಿತಿ ಪ್ರಕಟಿಸಲು ಅನುವು ಮಾಡಿಕೊಡಬೇಕು ಎಂಬುದು ಮತ್ತಿತರ ಬೇಡಿಕೆಗಳಾಗಿವೆ.

Related posts

Leave a Reply