Header Ads
Breaking News

ಗದ್ದೆಗಿಳಿದು ನೇಜಿ ನೆಟ್ಟ ವಿದ್ಯಾರ್ಥಿಗಳು ಸಿದ್ದಾಪುರ ಸರಸ್ವತಿ ವಿದ್ಯಾಲಯದ ಮಕ್ಕಳಿಗೆ ಕೃಷಿ ಪಾಠ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗೆ ಒತ್ತು

ದಿನಾಲು ತರಗತಿಯಲ್ಲಿ ಪುಸ್ತಕ, ಪೆನ್ನು ಹಿಡಿದು ಪಾಠ ಕೇಳುವ ವಿದ್ಯಾರ್ಥಿಗಳು ತಲೆಗೊಂದು ಮುಟ್ಟಾಳೆ ಧರಿಸಿ ಆಸಕ್ತಿಯಿಂದ ಗದ್ದೆಗಿಳಿದರು. ಜಿಟಿಜಿಟಿ ಮಳೆ, ಗಾಳಿಯನ್ನೂ ಲೆಕ್ಕಿಸದೆ ನೇಜಿ ನೆಡುವ ಕಾರ್ಯದಲ್ಲಿ ಪಾಲ್ಗೊಂಡು ಕೃಷಿಯ ಅನುಭವ ಪಡೆದರು. ಮಕ್ಕಳ ಕೃಷಿ ಚಟುವಟಿಕೆಗಳಿಗೆ ಶಾಲೆಯ ಶಿಕ್ಷಕಿಯರು ಕೂಡ ಸಾಥ್ ನೀಡಿದರು.ಸಿದ್ದಾಪುರ ಸರಸ್ವತಿ ವಿದ್ಯಾಲಯದ ಎಸೆಸ್ಸೆಲ್ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗದ್ದೆಗಿಳಿದು ಉತ್ಸಾಹದಿಂದ ನೇಜಿ ನೆಟ್ಟ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ.ಮಕ್ಕಳಿಗೆ ಶೈಕ್ಷಣಿಕ ವಿಚಾರಗಳ ಜೊತೆಗೆ ಜೀವನಾನುಭವದ ಪಾಠವೂ ಅಗತ್ಯವಾಗಿದ್ದು, ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗೆ ಒತ್ತು ನೀಡುವುದರೊಂದಿಗೆ ಸಿದ್ದಾಪುರ ಸರಸ್ವತಿ ವಿದ್ಯಾಲಯದ ಶಿಕ್ಷಕರು ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗದ್ದೆ ಬಯಲಲ್ಲಿ ಭತ್ತ ಬೇಸಾಯ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು.ಶಾಲಾ ಸಂಸ್ಥಾಪಕ, ಕೈಗಾರಿಕೋದ್ಯಮಿ ಗೋಪಾಲಕೃಷ್ಣ ಕಾಮತ್ ಅವರ ಗದ್ದೆಯಲ್ಲಿ ನೇಜಿ ಕಾರ್ಯ ನಡೆಸಿದ್ದು, ಕೃಷಿಕ ಭರತ್ ಕಾಮತ್ ಮಕ್ಕಳಿಗೆ ಕೃಷಿಯ ಬಗ್ಗೆ ತರಬೇತಿ ನೀಡಿದರು. ಮೊದಲೇ ಗದ್ದೆ ಉತ್ತು ಹದ ಮಾಡಲಾಗಿದ್ದು, ವಿದ್ಯಾರ್ಥಿಗಳು ನೇಜಿಯನ್ನು ಕಿತ್ತು ಗದ್ದೆಯಲ್ಲಿ ನೆಟ್ಟರು. ಕೃಷಿ ಕಾರ್ಯದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು ಬದುಕಿನ ಅನುಭವ ಪಡೆದು ಸಂತಸಪಟ್ಟರು.ಮಕ್ಕಳು ಸ್ವತಃ ಗದ್ದೆಗಿಳಿದರೆ ಮಾತ್ರ ಕೃಷಿಯ ಕಷ್ಟ-ಸುಖಗಳ ಕುರಿತು ಅರಿವು ಮೂಡಿಸಲು ಸಾಧ್ಯ ಎಂದ ಅರಿತ ಶಾಲೆಯ ಶಿಕ್ಷಕಿಯರು ತಾವೂ ಕೂಡ ಮಕ್ಕಳೊಂದಿಗೆ ಬೆರೆತು ಗದ್ದೆಗಿಳಿದು ಮಕ್ಕಳನ್ನು ಹುರಿದುಂಬಿಸಿದರು. ಶಿಕ್ಷಕಿಯರ ಮಾರ್ಗದರ್ಶನದೊಂದಿಗೆ ಗದ್ದೆಯಲ್ಲಿ ನೇಜಿಯ ಮೂಲಕ ಭಾರತ ಭೂಪಟವನ್ನು ರಚಿಸಿ ಫೋಟೋ ತೆಗೆದು ಖುಷಿಪಟ್ಟರು.ಗದ್ದೆಯಲ್ಲಿ ನೇಜಿ ನೆಟ್ಟ ಎಲ್ಲಾ ವಿದ್ಯಾರ್ಥಿಗಳಿಗೂ ವಿಶೇಷ ಉಪಹಾರ ವ್ಯವಸ್ಥೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ, ಶಿಕ್ಷಕಿಯರಾದ ಸರೋಜ, ಸೌಭಾಗ್ಯ ಕೊನೆತನಕವೂ ವಿದ್ಯಾರ್ಥಿಗಳೊಂದಿಗಿದ್ದು ನೇಜಿ ಉಸ್ತುವಾರಿ ನೋಡಿಕೊಂಡರು.

Related posts

Leave a Reply