Header Ads
Header Ads
Breaking News

ಗದ್ದೆಯಲ್ಲಿ ನೇಜಿ ನೆಡುವ ಬಗ್ಗೆ ಮಾಹಿತಿ

ಹಗಲು ಹೊತ್ತು ಶಾಲೆಯಲ್ಲಿ ಪಾಠ ಪ್ರವಚನ ಚಟುವಟಿಕೆಯಲ್ಲಿ, ರಾತ್ರಿ ಮೊಬೈಲ್, ಟಿ.ವಿ ನೋಡುವುದರಲ್ಲಿ ತಲ್ಲಿನರಾಗುವ ವಿದ್ಯಾರ್ಥಿಗಳಿಗೆ ದೇಶದ ಕೃಷಿ ಬೇಸಾಯ ಹಾಗೂ ಕೃಷಿ ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಮೂಲಕ ಮುಂದಿನ ಪೀಳಿಗೆ ವರೆಗೂ ಕೃಷಿ ಬೇಸಾಯವನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ನೇಜಿ ನೆಡುವ ಬಗ್ಗೆ ಮಾಹಿತಿ ನೀಡಲಾಯಿತು.ಕೆಸರು ಗದ್ದೆಯಲ್ಲಿ ತುಂಬಿರುವ ವಿದ್ಯಾರ್ಥಿಗಳ ಗುಂಪು, ಕೈಯಲ್ಲಿ ನೇಜಿ ಹಿಡಿದುಕೊಂಡಿರುವ ವಿದ್ಯಾರ್ಥಿಗಳು, ನೇಜಿ ನೆಡುತ್ತಾ.ಹಳ್ಳಿ ಗೀತೆ ಹಾಡುತ್ತಿರುವ ವಿದ್ಯಾರ್ಥಿಗಳು, ಇನ್ನೂ ಅವರ ಜತೆಯಲ್ಲಿ ಸಾಥ್ ಕೊಡುತ್ತಿರುವ ಶಾಲಾ ಶಿಕ್ಷಕರು.ಇದು ವಿಟ್ಲ ಸಮೀಪದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ಒಡಿಯೂರು ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಬಂದೊಡನೆ ಮೈದಾನಕ್ಕೆ ಆಟ ಆಡಲು ಹೋಗುತ್ತಾರೆ. ಬಳಿಕ ಬಂದು ಮನೆಯಲ್ಲಿ ಟಿ.ವಿ ನೋಡುವುದರಲ್ಲಿ ಹಾಗೂ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಲ್ಲಿಣರಾಗುತ್ತಿದ್ದಾರೆ. ಇತ್ತೀಚಿನ ಕೆಲವು ವಿದ್ಯಾರ್ಥಿಗಳಿಗೆ ನಾಡಿನ ಕೃಷಿಸಂಪತ್ತು ಹಾಗೂ ದೇಶದ ಬೆನ್ನೆಲುಬು ರೈತನ ಶ್ರಮದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.

ಇನ್ನೂ ಕೆಲವು ಮನೆಗಳಲ್ಲಿ ಬೇಸಾಯ ಕಾಯಕವಿದ್ದರೂ ಮೈಯಲ್ಲಿ ಕೆಸರು ಆಗಿ ಅನಾರೋಗ್ಯ ಪೀಡಿತರಾಗುತ್ತಾರೆ ಎಂಬ ಭಯದಿಂದ ಗದ್ದೆಗೆ ಇಳಿಯಲು ಮಕ್ಕಳನ್ನು ಬಿಡುತ್ತಿಲ್ಲ. ಇನ್ನೂ ಪಟ್ಟಣ ಭಾಗದಲ್ಲಿ ಕೃಷಿ ಬೇಸಾಯದ ಬಗ್ಗೆ ಕನಿಷ್ಠ ಜ್ಞಾನವೇ ಮಕ್ಕಳಲ್ಲಿ ಇರುವುದಿಲ್ಲ. ಇವುಗಳನ್ನು ಹೋಗಾಲಾಡಿಸಲು ಹಾಗೂ ಮುಂದಿನ ಪೀಳಿಗೆ ವರೆಗೂ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವೀ ಮಾತಾನಂದ ಮಯೀ ಅವರ ಮಾರ್ಗದರ್ಶನದಲ್ಲಿ ಸಂಸ್ಥಾನದ ಬನಾರಿ ಕೃಷಿ ಭೂಮಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಒಡಿಯೂರು ಶ್ರೀಗಳ ಪರಿಕಲ್ಪನೆಯಂತೆ ಮಕ್ಕಳಿಗೂ ಕೃಷಿ ಸಂಸ್ಕೃತಿಯ ಪರಿಚಯ ಮಾಡಲಾಗುತ್ತಿದೆ. ದೇಶ ಅಭಿವೃದ್ಧಿ ಹೊಂದಬೇಕಾದರೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಕೃಷಿ ಸಂಸ್ಕೃತಿ ಉಳಿದಾಗ ಹಳ್ಳಿಗಳು ಅಭಿವೃದ್ಧಿ ಹೊಂದುತ್ತದೆ. ಎತ್ತಿನ ಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟ ಹಾಳಾಗಿದೆ. ಹಿಂದಿನ ಪ್ರಕೃತಿ ಸೌಂದರ್ಯ ನಶಿಸಿ ಹೋಗಿದೆ. ಮನುಷ್ಯರು ಇಂದು ಸ್ವಾರ್ಥಕ್ಕಾಗಿ ಬದುಕುತ್ತಿದ್ದಾರೆ. ಬದುಕುವ ವಿಧಾನವನ್ನು ಪ್ರಕೃತಿಯೇ ನಮಗೆ ಹೇಳಿಕೊಡುತ್ತಿದೆ. ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಂಸ್ಥಾನದ ಸಾಧ್ವೀ ಮಾತಾನಂದ ಮಯೀ ಹೇಳಿದ್ದಾರೆ.ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ನೇಜಿ ನೇಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಆರು ವರ್ಷದಿಂದ ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಹೇಳಿಕೊಡಲಾಗುತ್ತಿದೆ. ಈ ಭೂಮಿಯಲ್ಲಿ ವರ್ಷಕ್ಕೆ ಏಣೇಲು ಹಾಗೂ ಸುಗ್ಗಿ ಎರಡು ಬೆಳೆಯನ್ನು ಬೆಳೆಸಲಾಗುತ್ತಿದೆ. ಇದರಿಂದ ಬರುವ ಸುಮಾರು 8ಕ್ವಿಂಟಲ್ ಅಕ್ಕಿಯನ್ನು ಮಕ್ಕಳ ಬಿಸಿಯೂಟ ಹಾಗೂ ಸಂಸ್ಥಾನದ ಉಪಯೋಗಕ್ಕೆ ಬಳಸಲಾಗುತ್ತಿದೆ. ಈ ಗದ್ದೆಯಲ್ಲಿ ಚಾಪೆ ನೇಜಿಯನ್ನು ನೆಡಲಾಗುತ್ತಿದೆ.

ಅದು ಆಧುನಿಕ ಕೃಷಿ ಪದ್ಧತಿಗೆ ಪೂರಕವಾಗಿರುತ್ತದೆ ಹಾಗೂ ೧೨ ದಿನದಲ್ಲಿ ಅದು ಬೆಳೆಯುತ್ತದೆ. ಅದಲ್ಲದೇ ಯಾವುದೇ ಯಂತ್ರದ ಮೂಲಕ ನೀರು ಸರಬರಾಜು ಮಾಡದೇ ಹರಿಯುವ ನೀರನ್ನು ಗದ್ದೆ ಬಿಡಲಾಗುತ್ತಿದೆ. ಯಾವುದೇ ರಾಸಯನಿಕ ಗೊಬ್ಬರ ಉಪೋಗಿಸದೇ ಜೈವಿಕ ಗೊಬ್ಬರದಲ್ಲಿ ನೇಜಿಯನ್ನು ಬೆಳೆಸಲಾಗುತ್ತಿದೆ. ಇದರಿಂದ ಬೆಳೆ ಸಮೃದ್ಧವಾಗಿರುತ್ತದೆ ಎಂಬುದು ಕೃಷಿಕರ ಅಭಿಪ್ರಾಯ.ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಇಂದು ಪುಸ್ತಕದಲ್ಲಿರುವ ವಿಷಯವನ್ನು ಮಾತ್ರ ಹೇಳಿಕೊಡಲಾಗುತ್ತಿದೆ. ಆದರೆ ಈ ಸಂಸ್ಥೆಯಿಂದ ನಮಗೆ ಶಿಕ್ಷಣದ ಜತೆಗೆ ಕೃಷಿ ಸಂಸ್ಕೃತಿಯನ್ನು ಹೇಳಿಕೊಡಲಾಗುತ್ತಿದೆ. ಇದರಿಂದ ರೈತನ ಕಷ್ಟದ ಬಗ್ಗೆ ನಮಗೆ ಅರಿವಾಗಿದೆ. ಆಹಾರವನ್ನು ವ್ಯರ್ಥ ಮಾಡುವವರಿಗೆ ಇಂತಹ ಕೃಷಿಯ ಬಗ್ಗೆ ಮಾಹಿತಿ ನೀಡಬೇಕುಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳ ಜನ್ಮದಿನೋತ್ಸವ-ಗ್ರಾಮೋತ್ಸವ ಪ್ರಯುಕ್ತ ಇದೇ ಕೃಷಿ ಭೂಮಿಯಲ್ಲಿ ಕೆಸರ್‌ಡೊಂಜಿ ಕಾರ್ಯಕ್ರಮದ ಮೂಲಕ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆನಿಂದ ಸಂಜೆ ವರೆಗೆ ಕೆಸರು ಗದ್ದೆಯಲ್ಲಿ ಆಡಿ ಕುಪ್ಪಳಿಸಿದ್ದರು. ಇದೀಗ ಅದೇ ಗದ್ದೆಯಲ್ಲಿ ವಿದ್ಯಾರ್ಥಿಗಳು ನೇಜಿ ನೆಟ್ಟಿದ್ದಾರೆ. ವಿದ್ಯಾರ್ಥಿಗಳ ಜತೆಯಲ್ಲಿ ಸಂಸ್ಥಾನದ ಸಾಧ್ವೀ ಮಾತಾನಂದ ಮಯೀ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್, ಗದ್ದೆಯ ಉಸ್ತುವಾರಿ ನೋಡಿಕೊಳ್ಳುವ ಸುರೇಶ್ ಹಾಗೂ ಶಿಕ್ಷಕರು ಸ್ಥಳೀಯರು ಮಹಿಳೆಯರು ಸಾಥ್ ನೀಡಿದ್ದಾರೆ.ಪ್ರತಿನಿತ್ಯ ಶಾಲಾ ವಠಾರದಲ್ಲಿ ಪಾಠದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆ ಗದ್ದೆಗೆ ಇಳಿದು ನೇಜಿ ನೆಡುವ ಈ ಕಾರ್ಯ ತುಂಬನೇ ಖುಷಿಕೊಟ್ಟಿದೆ. ಮುಂದಿನ ಪೀಳಿಗೆ ವರೆಗೂ ಕೃಷಿ ಸಂಸ್ಕೃತಿ ಕೊಂಡೊಯ್ಯುವ ಹುಮ್ಮಸ್ಸು ವಿದ್ಯಾರ್ಥಿಗಳ ಮುಖದಲ್ಲಿ ಕಾಣಿಸುತ್ತಿತ್ತು.

Related posts

Leave a Reply