Header Ads
Header Ads
Breaking News

ಗಬ್ಬು ನಾರುತ್ತಿದೆ ಶಾಸ್ತ್ರೀ ಸರ್ಕಲ್. ಪಾದಚಾರಿಗಳಿಗೆ ಕೊಳಚೆ ನೀರಿನಾಭಿಷೇಕ. ನಗರದ ಹೃದಯಭಾಗದಲ್ಲಿ ಕೊಳಚೆ ನೀರು .

ಹೊಂಡಗುಂಡಿಗಳ ರಾಷ್ಟ್ರೀಯ ಹೆದ್ದಾರಿ ಸಹವಾಸ ಸಾಕಪ್ಪ ಎಂದು ಸವಾರರು ತಮ್ಮ ವಾಹನಗಳನ್ನು ಸರ್ವೀಸ್ ರಸ್ತೆಗಿಳಿಸಿದರೆ ಇಲ್ಲಿ ಮತ್ತೊಂದು ಸಮಸ್ಯೆ ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ. ದಿನನಿತ್ಯವೂ ಪಾದಚಾರಿಗಳಿಗೆ ಕೊಳಚೆ ನೀರಿನಾಭಿಷೇಕ ತಪ್ಪಿದ್ದಲ್ಲ. ಕಳೆದ ಒಂದು ತಿಂಗಳುಗಳಿಂದ ಹೊಟೇಲ್‌ಗಳ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದ್ದರೂ ನಿದ್ರಾವಸ್ಥೆಯಲ್ಲಿರುವ ಪುರಸಭೆಯು ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಸ್ಥಳೀಯ ಪುರಸಭೆ ಆಡಳಿತದ ಕಣ್ಣು-ಕಿವಿಗೆ ಅದ್ಯಾವ ರೋಗ ಬಡಿದಿದೆಯೋ ಗೊತ್ತಿಲ್ಲ. ನಗರದ ಹೃದಯಭಾಗ ಎಂದೇ ಗುರುತಿಸಲಾಗುವ ಶಾಸ್ತ್ರಿ ವೃತ್ತದ ಮಗ್ಗುಲಿನ ಸರ್ವಿಸ್ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ ಪುರಸಭೆ ಇದೊಂದು ಸಮಸ್ಯೆಯೇ ಅಲ್ಲ ಎಂಬಂತೆ ನಿರ್ಲಕ್ಷ್ಯ ತಳೆದಿರುವ ಬಗ್ಗೆ ಮೂಗುಮುಚ್ಚಿಕೊಂಡೇ ತಿರುಗುತ್ತಿರುವ ಸ್ಥಳೀಯರು v4 ವಾಹಿನಿಗೆ ದೂರಿದ್ದಾರೆ. ಕುಂದಾಪುರ ಹೃದಯಭಾಗವಾದ ಶಾಸ್ತ್ರಿವೃತ್ತದ ಫೈಓವರ್ ಸಮೀಪದ ಸರ್ವೀಸ್ ರಸ್ತೆಯು ಈಗ ಗಬ್ಬೆದ್ದು ನಾರುತ್ತಿದೆ. ವಿವಿಧ ಆಸ್ಪತ್ರೆ, ಹೋಟೇಲುಗಳಿಂದ ಹೊರಬಿಡುವ ತ್ಯಾಜ್ಯ ನೀರು ಸಾಗಿಸುವ ಪೈಪ್ ಒಡೆದು ಹೋಗಿದ್ದು, ಕೊಳಚೆ ನೀರೆಲ್ಲಾ ಸರ್ವೀಸ್ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಈ ಮಾರ್ಗದಲ್ಲಿ ತಿರುಗುವ ನಾಗರಿಕರು, ಸವಾರರು ಮೂಗು ಮುಚ್ಚಿಕೊಂಡೆ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಸರದ ಶಾಲಾ ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು, ಕಛೇರಿಗಳಿಗೆ ತೆರಳುವ ಉದ್ಯೋಗಸ್ಥರು, ಇಲ್ಲೇ ಸ್ವಂತ ವ್ಯವಹಾರ ಮಾಡಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಹೊಂದಿರುವವರು, ಎಲ್ಲರೂ ಇದೇ ರಸ್ತೆಯಲ್ಲಿ ಸಂಚರಿಸುವಾಗ ಮೂಗು ಮುಚ್ಚಿಕೊಂಡೆ ಹೋಗುವುದು ಮಾಮೂಲಿಯಂತಾಗಿಬಿಟ್ಟಿದೆ. ಈ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗದ ಭೀತಿ ಆಸುಪಾಸಿನ ನಾಗರಿಕರನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಇಷ್ಟೆಲ್ಲ ಸಮಸ್ಯೆಗಳು ಜನರನ್ನು ಕಾಡುತ್ತಿದ್ದರೂ ಕೂಡ, ಸಂಬಂಧಪಟ್ಟವರು ಅದೇನು ಮಾಡುತ್ತಿದ್ದಾರೋ ತಿಳಿಯದು. ಒಂದೆಡೆ ಪುರಸಭೆ ’ಸ್ವಚ್ಛ ಭಾರತ’ದ ಬಗ್ಗೆ ದಿನಬೆಳಗಾದರೆ ಪುಂಗಿ ಊದುತ್ತಲೇ ಇದೆ. ಕೊನೆ ಪಕ್ಷ ಜನನಿಬಿಡ ಪರಿಸರದಲ್ಲಿ, ಅದೂ ಕುಂದಾಪುರದ ಕೇಂದ್ರ ಸ್ಥಾನದಲ್ಲಿ ಇಂಥದೊಂದು ಭಯಾನಕ ಸಮಸ್ಯೆ ಬಗೆಹರಿಸದ ಪುರಸಭೆಯ ಬಗ್ಗೆ ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಿಂಚಂಚೆ ಮೂಲಕ ದೂರು ಸಲ್ಲಿಸುವುದೊಂದೇ ಬಾಕಿ ಉಳಿದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಾಪುರ ಎಂದೊಡನೆ ಕೆ.ಎಲ್.ಕಾರಂತರು ಪರಿಸರ ಕಾಳಜಿಯಿಂದ ತನ್ನ ಕೈಯಾರೆ ನೆಟ್ಟು ಪೋಷಿಸಿದ ಸಾಲು ಮರಗಳ ಬಗ್ಗೆ ಜನ ಮಾತಾಡುವ ಕಾಲ ಒಂದಿತ್ತು. ಆ ಕಾಲದಲ್ಲಿ ಕುಂದಾಪುರ ಎಂದೊಡನೆ ಇಲ್ಲಿನ ಜನರ ಪರಿಸರ ಕಾಳಜಿಯ ಬಗ್ಗೆ ಹೊರಗಿನಿಂದ ಬಂದ ಜನರ ಬಾಯಿಯಲ್ಲಿ ಮೆಚ್ಚುಗೆಯ ಮಾತುಗಳು ಬರುತ್ತಿದ್ದವಂತೆ. ಕೆಲ ವರ್ಷಗಳ ಹಿಂದೆ ಸಂಗಮ್ ಪರಿಸರದಲ್ಲಿ ಪುರಸಭೆ ಕಾನೂನು ಗಾಳಿಗೆ ತೂರಿ ನಿರ್ಮಿಸಿದ ಡಂಪಿಂಗ್ ಯಾರ್ಡ್‌ನಿಂದ ಪರಿಸರದಲ್ಲಿ ಗಬ್ಬು ವಾಸನೆಯಿಂದ ಕುಖ್ಯಾತಿ ಪಡೆದಿತ್ತು. ಇಂದೇನಾಗಿದೆ ನೋಡಿ. ಕುಂದಾಪುರದ ಹೃದಯ ಭಾಗದಲ್ಲೇ ಕೊಳಚೆ ನೀರು ರಸ್ತೆಯಲ್ಲಿ ಹರಿಯುವುದರ ಮೂಲಕ ಗಬ್ಬು ವಾಸನೆ ಬೀರುತ್ತಿದ್ದರೂ ಪುರಸಭೆಗೆ ಒಂದಿನಿತೂ ಕಾಳಜಿಯೇ ಇಲ್ಲ!ಇಂಥ ಪುರಸಭೆಗೆ ಘನತ್ಯಾಜ್ಯಗಳ ವಿಲೇವಾರಿಯಲ್ಲಿ ಮೊದಲ ಸ್ಥಾನವಂತೆ! ರಾಜ್ಯ ಮಟ್ಟದಲ್ಲಾ, ರಾಷ್ಟ್ರಮಟ್ಟದಲ್ಲಾ, ಇಂಟರ್ನ್ಯಾಷನಲ್ ಮಟ್ಟದಲ್ಲಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Related posts

Leave a Reply