Header Ads
Header Ads
Breaking News

ಗಬ್ಬೆದ್ದು ನಾರುತ್ತಿರುವ ಮಂಜೇಶ್ವರ ಪ್ರದೇಶ:ರೋಗದ ಭೀತಿಯಲ್ಲಿ ಸ್ಥಳೀಯರು.

ಮಂಜೇಶ್ವರ:ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರದೇ ಮಂಜೇಶ್ವರ ಪರಸರವಿಡೀ ದುರ್ನಾತ ಬೀರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೂ ತ್ಯಾಜ್ಯಗಳು ತುಂಬಿ ತುಳುಕುತ್ತಿದೆ. ನಾಗರಿಕರಂತೂ ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿ. ಇದರ ಜೊತೆ ಸಾಂಕ್ರಾಮಿಕ ರೋಗದ ಭೀತಿಯನ್ನು ಜನತೆ ಎದುರಿಸುವಂತಾಗಿದೆ.

ತ್ಯಾಜ್ಯಗಳು ದುರ್ವಾಸನೆ ಬೀರಿ ನಾರುತಿದ್ದರೂ ಇದನ್ನು ಕೊಂಡೊಯ್ದು ಸಂಸ್ಕರಿಸಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದು ಅಧಿಕಾರಿಗಳಿಗೂ ಅದೇ ರೀತಿ ಜನಪ್ರತಿನಿಧಿಗಳಿಗೂ ತಲೆನೋವಾಗಿ ಪರಿಣಮಿಸಿದೆ. ರಾತ್ರಿ ಅಥವಾ ಮುಂಜಾನೆ ವೇಳೆಗಳಲ್ಲಿ ಬೈಕ್ ಹಾಗೂ ಕಾರುಗಳಲ್ಲಿ ತಂದು ಬಿಸಾಡುತ್ತಿರುವ ತ್ಯಾಜ್ಯಗಳನ್ನು ಆಹಾರವನ್ನು ಹುಡುಕಿ ಕೊಂಡು ಬರುತ್ತಿರುವ ನಾಯಿಗಳು ರಸ್ತೆ ಮಧ್ಯೆ ಅದೇ ರೀತಿ ಜನರು ನಡೆದಾಡುವ ಸ್ಥಳದಲ್ಲಿ ಎಳೆದು ಹಾಕುತ್ತಿರುವುದು ತೀರಾ ಅಸಹ್ಯವಾಗಿ ಪರಿಣಮಿಸುತ್ತಿದೆ.ಹೊಸಂಗಡಿ, ಮಂಜೇಶ್ವರ ರಾಗಂ ಜಂಕ್ಷನ್, ರೈಲ್ವೇ ಸ್ಟೇಶನ್ ರಸ್ತೆ, ಕುಂಜತ್ತೂರು, ತೂಮಿನಾಡು ಮೊದಲಾದ ಸ್ಥಳಗಳಲ್ಲಿ ತ್ಯಾಜ್ಯಗಳು ಶೇಖರಣೆಯಾಗುತ್ತಿವೆ.ಹೊಸಂಗಡಿಯ ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆದು ಪರಿಸರಗಳಲ್ಲೆಲ್ಲಾ ತ್ಯಾಜ್ಯದ ದುರ್ಗಂಧ ಇಲ್ಲಿಗೆ ಆಗಮಿಸುತ್ತಿರುವ ಜನರನ್ನು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುವ ಸ್ಥಿತಿಯನ್ನು ತಂದೊಡ್ಡಿದೆ. ತ್ಯಾಜ್ಯವನ್ನು ಸಂಸ್ಕರಣ ಮಾಡಲು ಪ್ರತ್ಯೇಕವಾದ ಯೋಜನೆಗಳನ್ನು ಅಥವಾ ಇನ್ನಿತರ ಯಾವುದೇ ವ್ಯವಸ್ಥೆಯನ್ನು ಕಲ್ಪಿಸದೇ ಇರುವುದು ಮಂಜೇಶ್ವರದ ಪರಿಸರದಲ್ಲಿ ಇಷ್ಟೊಂದು ತ್ಯಾಜ್ಯಗಳು ಶೇಖರಣೆಯಾಗಲು ಪ್ರಮುಖ ಕಾರಣವೆಂದೇ ಹೇಳಬಹುದು.ಮಳೆಗಾಲಕ್ಕೆ ಅಲ್ಪ ಮೊದಲು ಪಂಚಾಯತಿನವರ ವತಿಯಿಂದ ಬಹುತೇಕ ಸ್ಥಳಗಳಿಂದ ತ್ಯಾಜ್ಯವನ್ನು ನಿರ್ಮೂಲನಗೊಳಿಸಿದ್ದರೂ ಇದೀಗ ಮತ್ತೆ ಅದೇ ರೀತಿ ತ್ಯಾಜ್ಯಗಳ ರಾಶಿಯಾಗಿದೆ.

ಅಂಗಡಿ ಪದವು, ಉದ್ಯಾವರ ಸೇರಿದಂತೆ ಇತರ ಪ್ರದೇಶಗಳಲ್ಲೂ ತ್ಯಾಜ್ಯಗಳು ತುಂಬಿ ಸೊಳ್ಳೆಗಳ ಉತ್ಪಾಧಣೆ ಕೇಂದ್ರವಾಗಿ ಮಾರ್ಪಟ್ಟಿದೆ. ಮಂಜೇಶ್ವರದಲ್ಲಿ ಗ್ರಾ. ಪಂ.ಅಧ್ಯಕ್ಷರ ಮುತುವರ್ಜಿಯಿಂದ ತ್ಯಾಜ್ಯ ಸಂಸ್ಕರಣೆಗೆ ಸ್ಥಳವನ್ನು ನಿಗದಿಪಡಿಸಲಾಗಿತ್ತು. ಆದರೆ ಬಳಿಕ ಊರವರ ವಿರೋಧದಿಂದ ಆ ಯೋಜನೆ ಕೂಡಾ ಹಾಗೇ ಬಾಕಿ ಉಳಿಯಿತು. ತ್ಯಾಜ್ಯಗಳು ಗಬ್ಬೆದ್ದು ನಾರುತ್ತಿರುವ ಜೊತೆಯಾಗಿ ಸೊಳ್ಳೆಗಳ ಕಾಟ ಕೂಡಾ ಅತಿಯಾಗಿದೆ. ಇತ್ತೀಚೆಗೆ ಮಚ್ಚಂಪ್ಪಾಡಿಯಲ್ಲಿ ಹಂದಿ ಜ್ವರ ಕೂಡಾ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಊರವರು ರೋಗದ ಭಯದಲ್ಲಿ ಕಾಲವನ್ನು ಕಳೆಯುತಿದ್ದಾರೆ.

Related posts

Leave a Reply