
ಮಂಗಳೂರು ತಾಲೂಕಿನ ಗುರುಪುರ ಹೊಳೆಯಲ್ಲಿ ಮರಳುಗಾರಿಕೆ ಉದ್ಯಮದವರು ಮರಳುಗಾರಿಕೆ ನಡೆಸುವುದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೂಲ ನದಿ ಮೀನುಗಾರರ ಸಂಘದವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೀನುಗಾರ ಮುಖಂಡ ವಾಸುದೇವ ಬೋಳೂರು ಅವರು, ನಮ್ಮ ಪೂರ್ವಿಕರ ಕಾಲದಿಂದಲೂ ಸಾಂಪ್ರದಾಯಿಕ ಮೀನುಗಾರಿಕೆಯು ನಡೆದುಕೊಂಡು ಬಂದಿರುತ್ತೇವೆ. ನಮ್ಮ ಈಗಿನ ಪೀಳಿಗೆಯವರು ಕೂಡ ಸಾಂಪ್ರದಾಯಿಕ ವಿವಿಧ ರೀತಿಯ ಮೀನುಗಾರಿಕೆಯನ್ನು ಗುರುಪುರ ಹೊಳೆಯಲ್ಲಿ ನಡೆಸುತ್ತಾ ಜೀವನ ನಡೆಸುತ್ತಿದ್ದಾರೆ. ಈಗ ಈ ಹೊಳೆಯ ಮರಳುಗಾರಿಕೆ ಉದ್ಯಮದವರು ಅಲ್ಲಲ್ಲಿ ಮರಳು ಎತ್ತುವ ಕಾರಣ ನದಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ತೀವ್ರವಾದ ಆತಂಕ ಎದುರಾಗಿದೆ. ಮರಳು ತೆಗೆದು ನೀರಿನ ಆಳ ಜಾಸ್ತಿ ಆಗುವುದರಿಂದ ದೋಣಿಯಿಂದ ನೀರಿಗೆ ಇಳಿದು ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದೆ.ರಾತ್ರಿ ವೇಳೆ ಇಂಜಿನ್ ಬಳಸಿ ಮರಳು ಎತ್ತುವ ಉದ್ದಿಮೆದಾರರೂ ಇದ್ದಾರೆ. ಈ ಕಾರಣದಿಂದ ಹೊಳೆಯ ಕೆಲವು ಕಡೆ ಸುಮಾರು 30 ಅಡಿಗಳಷ್ಟು ಆಳ ಸಂಭವಿಸಿದ್ದು, ಈ ಸ್ಥಳದಲ್ಲಿ ಸುಣ್ಣದ ಕಲ್ಲಿನಂತಹ ರಾಸಾಯನಿಕ ಪದರುಗಳು ಮೇಲಕ್ಕೆ ಬಂದಿದ್ದು ಇದು ಮೀನುಗಾರರಿಗೆ ಅಡ್ಡಿಯಾಗಿದೆ. ಆದುದರಿಂದ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮೂಲ ನದಿ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಸಾಲ್ಯಾನ್, ಹರೀಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.