Header Ads
Header Ads
Breaking News

ಡಿ. 9ರಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಕೊಡಿಮರ, ಬಿಂಬಮರ ಸಮರ್ಪಣೆ ನಡೆಯಲಿರುವ ಕಾರ್ಯಕ್ರಮ

ಪುತ್ತೂರು:ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ಗೆ ಡಿಸೆಂಬರ್ 09ರಂದು ಕೊಡಿಮರ ಮತ್ತು ಬಿಂಬ ಮರ ಆಗಮನವಾಗಲಿದ್ದು, ಇದನ್ನು ಭಕ್ತಿಪೂರ್ವಕ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಸಮರ್ಪಿಸಲಾಗುತ್ತದೆ ಎಂದು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪುನರುತ್ಥಾನ ಯೋಜನೆಗಳು ತ್ವರಿತಗತಿಯಿಂದ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಡಿಸೆಂಬರ್ 9ರಂದು ಸ್ಥಾಪನೆಯಾಗಲಿದೆ ಎಂದರು.
ಕ್ಷೇತ್ರದ ಆದಿದೈವ ಧೂಮಾವತಿ ದೈವಸ್ಥಾನಕ್ಕೆ ನಿರ್ಮಿಸಲಿರುವ ಧ್ವಜಸ್ತಂಭಕ್ಕೆ ಕೊಡಿಮರ ಮತ್ತು ಕಾರಣಿಕ ಶಕ್ತಿಗಳಾದ ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ, ಅವಳಿ ವೀರರು ಕೋಟಿ ಚೆನ್ನಯರ ಮೂರ್ತಿಗಳನ್ನು ಕೆತ್ತಲು ಬಳಸಲಾಗುವ ಬಿಂಬ ಮರ ಇವೆರಡನ್ನೂ ಡಿ.9ರಂದು ಮಧ್ಯಾಹ್ನ ಏಕಕಾಲಕ್ಕೆ ಶ್ರೀ ಕ್ಷೇತ್ರಕ್ಕೆ ತರಲಾಗುತ್ತದೆ. 4 ಮೂರ್ತಿಗಳನ್ನು ಒಂದೇ ಮರದಲ್ಲಿ ಕೆತ್ತಲಾಗುತ್ತಿರುವುದು ವಿಶೇಷವಾಗಿದೆ.
ಅಂದು ಬೆಳಗ್ಗೆ 9.30ಕ್ಕೆ ಪುತ್ತೂರು – ಸುಳ್ಯ ಹೆದ್ದಾರಿಯ ಕೌಡಿಚಾರ್ ಜಂಕ್ಷನ್‌ನಿಂದ ಅವಳಿ ಮರಗಳ ಸಂಯೋಜಿತ ಮೆರವಣಿಗೆ ನಡೆಯಲಿದೆ. ಜನಪ್ರತಿನಿಗಳು, ಸಾಮಾಜಿಕ, ಧಾರ್ಮಿಕ ನಾಯಕರು, ಭಕ್ತರ ಉಪಸ್ಥಿತಿಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
ಇದಕ್ಕೆ ಪೂರ್ವಭಾವಿಯಾಗಿ ಡಿ.9ರಂದು ಸಂಜೆ 9.30ಕ್ಕೆ ಸುಳ್ಯ ನಗರದಲ್ಲಿ ಬಿಂಬ ಮರದ ಮೆರವಣಿಗೆ ನಡೆಯಲಿದೆ. 9ರಂದು ಕೊಡಿ ಮರ ಮತ್ತು ಬಿಂಬ ಮರಗಳ ಸಂಯೋಜಿತ ಮೆರವಣಿಗೆ ಕೌಡಿಚಾರ್‌ನಿಂದ ಶ್ರೀ ಕ್ಷೇತ್ರಕ್ಕೆ ತೆರಳಲಿದೆ ಎಂದು ವಿವರಿಸಿದರು.
2007ರ ಪೆಬ್ರುವರಿ 19ರಂದು ಕ್ಷೇತ್ರದ ಪುನರುತ್ಥಾನಕ್ಕೆ ಶಿಲಾನ್ಯಾಸ ನಡೆದಿತ್ತು. ಪ್ರಸ್ತುತ ಶ್ರೀಕ್ಷೇತ್ರದಲ್ಲಿ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಕಲ್ಲಾಲ್ದಾಯ ಸಾನಿಧ್ಯ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಮಹಾಮಾತೆ ದೇಯಿ ಬೈದ್ಯೆತಿ ಮಹಾಸಮಾ, ಗುರು ಸಾಯನ ಬೈದ್ಯರು ಮತ್ತು ದೇಯಿ ಬೈದ್ಯೆತಿ ಧರ್ಮ ಚಾವಡಿ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ ನಿರ್ಮಾಣ ಭರದಿಂದ ನಡೆಯುತ್ತಿದೆ ಎಂದರು.
ಗೆಜ್ಜೆಗಿರಿ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ರಾಜಶೇಖರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply