Header Ads
Breaking News

ಗ್ಯಾಸ್ ಪೈಪ್‌ಲೈನ್‌ನಿಂದ ತೊಂದರೆಗೊಳಗಾದ ರೈತರು

ಮಂಗಳೂರಿಗೆ ಕೇರಳದ ಕೊಚ್ಚಿಯಿಂದ ಗ್ಯಾಸ್ ಪೈಪ್‌ಲೈನ್ ಬರುತ್ತದೆ, ಮುಂದೆ ಮನೆ ಮನೆಗೆ ನಳ್ಳಿ ನೀರಿನಂತೆ ಗ್ಯಾಸ್ ಪೂರೈಕೆಯಾಗುತ್ತದೆ, ಮಂಗಳೂರು ಮತ್ತಷ್ಟು ‘ಸ್ಮಾರ್ಟ್’ ಆಗುತ್ತದೆ ಎಂಬ ದೊಡ್ಡ ದೊಡ್ಡ ಕನಸುಗಳನ್ನು ನಗರವಾಸಿಗಳು ಕಾಣುತ್ತಿದ್ದರೆ, ಅತ್ತ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ಜಾಗದ ನೂರಾರು ರೈತರು, ಭೂಮಾಲೀಕರು ಈಗಲೇ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಭವಿಷ್ಯದಲ್ಲಿ ಏನು ಅಪಾಯ ಕಾದಿದೆಯೋ ಎನ್ನುವ ಆತಂಕವೂ ಅವರನ್ನು ಹೈರಾಣುಗೊಳಿಸುತ್ತಿದೆ.ಕೇರಳದ ಕೊಚ್ಚಿಯಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೇಲ್)ನ ಪೈಪ್‌ಲೈನ್ ಕಾಮಗಾರಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ- ಬಿಸಿಲೆನ್ನದೆ ಭರದಿಂದ ನಡೆಯುತ್ತಿದೆ. ಒಟ್ಟು437 ಕಿ.ಮೀ. ಉದ್ದದ ಪೈಪ್‌ಲೈನ್‌ನಲ್ಲಿ ದ.ಕ. ಜಿಲ್ಲೆಯ 34 ಕಿ.ಮೀ. ಸೇರಿದ್ದು, ಅದರಲ್ಲಿ 25 ಕಿ.ಮೀ.ಗೂ ಅಧಿಕ ಕಾಮಗಾರಿ ಪ್ರಗತಿಯಲ್ಲಿದೆ. ಕೇರಳದಲ್ಲಿ ಭಾರಿ ಪ್ರತಿರೋಧದ ನಡುವೆಯೇ ಕಾಮಗಾರಿ ನಡೆಯುತ್ತಿದ್ದರೆ, ದಕ್ಷಿಣ ಕನ್ನಡದ ರೈತರು ಹಾಗೂ ಭೂ ಮಾಲೀಕರಿಗೆ ಪರಿಹಾರ ನೀಡಿ ಬಾಯಿ ಮುಚ್ಚಿಸುತ್ತಿರುವುದರಿಂದ ದೊಡ್ಡ ಮಟ್ಟದ ಬಹಿರಂಗ ವಿರೋಧ ಕಂಡುಬರುತ್ತಿಲ್ಲ. ಆದರೆ ಕಾಮಗಾರಿಯ ಓಘಕ್ಕೆ ಈಗಲೇ ಜನ ಬೆಚ್ಚಿ ಬಿದ್ದಿದ್ದಾರೆ. ಬಹುತೇಕ ಸಂತ್ರಸ್ತರಿಗೆ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ ಭವಿಷ್ಯದಲ್ಲಿ ಏನು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲಿದಲ್ಲಿದ್ದಾರೆ. ಈ ಪೈಪ್‌ಲೈನ್ ಬಂಟ್ವಾಳ ಮತ್ತು ಮಂಗಳೂರಿನ 16 ಹಳ್ಳಿಗಳ ಮೂಲಕ ಹಾದು ಹೋಗಲಿದೆ. ಇದೀಗ ಬಂಟ್ವಾಳದ ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಗೇಲ್ ಕಂಪೆನಿಯ ಜೆಸಿಬಿ, ಹಿಟಾಚಿ ಯಂತ್ರಗಳು ತೋಟ, ಫಲವತ್ತಾದ ಗದ್ದೆ, ತೋಡು, ದಾರಿ ಯಾವುದನ್ನೂ ಲೆಕ್ಕಿಸದೆ 10 ಮೀಟರ್ ಅಗಲದಲ್ಲಿ ಸರ್ವ ಸೊತ್ತನ್ನೂ ನೆಲಸಮಗೊಳಿಸುತ್ತ ಮುನ್ನುಗ್ಗುತ್ತಿದೆ.

 

ಪೈಪ್ ವೆಲ್ಡಿಂಗ್ ಮೆಶಿನ್‌ಗಳು, ಲಾರಿಗಳ ನಿರಂತರ ಸಂಚಾರದಿಂದ ಹಾಗೂ ಇತ್ತೀಚೆಗೆ ಮಳೆಯೂ ಬಂದಿರುವುದರಿಂದ ಪೈಪ್ ಸಾಗುವ ದಾರಿಯುದ್ದಕ್ಕೂ ರಾಡಿಯೆದ್ದಿದೆ. ಇದರಿಂದಾಗಿ ರೈತರು ತಮ್ಮ ಉಳಿದ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲೂ ಅಸಾಧ್ಯವಾದ ಪರಿಸ್ಥಿತಿಗೆ ತಲುಪಿದ್ದಾರೆ.ಮಳೆಗಾಲದಲ್ಲೇ ಈ ಕಾಮಗಾರಿ ನಡೆಯುತ್ತಿರುವುದರಿಂದ ಸಣ್ಣಪುಟ್ಟ ತೋಡುಗಳೆಲ್ಲ ಮುಚ್ಚಲ್ಪಟ್ಟಿವೆ. ನೀರು ಹರಿಯಲು ದಾರಿಯಿಲ್ಲದೆ ಬೆಳೆ ಬೆಳೆಯುವ ಇತರ ಭಾಗಗಳಿಗೂ ನೀರು ನುಗ್ಗಿ ಬೆಳೆಹಾನಿಯಾಗುವ ಆತಂಕ ಒಂದೆಡೆಯಾದರೆ, ತೋಟಗಳಲ್ಲಿ ನೀರು ನಿಂತು ಹಾಳಾಗುವ ಅಪಾಯವೂ ಇz ಇದೆ.“ಪೈಪ್‌ಲೈನ್ ದಾರಿಯುದ್ದಕ್ಕೂ ತೋಟ, ಗದ್ದೆಗಳನ್ನು ನೆಲಸಮಗೊಳಿಸಿ ರಸ್ತೆ ಮಾಡಿ ಕೆಸರುಗದ್ದೆಯಂತೆ ಮಾಡಿದ್ದಾರೆ. ಮಳೆಗಾಲದ ಮುನ್ನೆಚ್ಚರಿಕೆಯಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನೂ ಮಾಡಿಲ್ಲ. ಹೀಗೆ ಮಾಡಿದರೆ ರೈತರು ಮಳೆಗಾಲವನ್ನು ಎದುರಿಸುವುದು ಹೇಗೆ? ಪಾದಲ್ಪಾಡಿಯಲ್ಲಿ ತೋಡನ್ನೇ ಬಂದ್ ಮಾಡಿದ್ದರು. ನಾವು ಧ್ವನಿ ಎತ್ತಿದ್ದರಿಂದ ಮತ್ತೆ ಬಿಡಿಸಿಕೊಟ್ಟರು. ಆದರೆ ಅಸಹಾಯಕರು ಹೆಚ್ಚಿರುವ ಗ್ರಾಮೀಣ ಪ್ರದೇಶದಲ್ಲಿ ಯಾರು ಧ್ವನಿ ಎತ್ತುತ್ತಾರೆ? ಅಲ್ಲದೆ, ಕೆಲಸಗಾರರು ಹಿಂದಿ ಭಾಷಿಕರಾಗಿರುವುದರಿಂದ ರೈತರಿಗೂ ಸಂವಹನಕ್ಕೆ ಸಮಸ್ಯೆಯಾಗಿದೆ” ಎಂದು ರೈತ ನರಸಿಂಹ ಭಟ್ ಅಳಲು ತೋಡಿಕೊಂಡಿದ್ದಾರೆ.

“ಅನೇಕ ಕಡೆಗಳಲ್ಲಿ ತೋಡಿನ ಬದಿಯ ಮಣ್ಣಿನ ದಾರಿಗಳನ್ನೆಲ್ಲ ನೆಲಸಮಗೊಳಿಸಿದ್ದಾರೆ. ಮಳೆಗಾಲದಲ್ಲಿ ನೀರು ನಿಂತು ಅಲ್ಲಿ ರಾಡಿಯಾಗುತ್ತದೆ. ಈ ದಾರಿಯನ್ನೇ ಅವಲಂಬಿಸುವ ಗ್ರಾಮೀಣ ಪ್ರದೇಶದ ಜನರು, ಶಾಲೆಗೆ ಹೋಗುವ ಮಕ್ಕಳಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಪರಿಹಾರ ಸಿಗದವರಿಗೂ ಈ ಕಾಮಗಾರಿಯಿಂದ ತೊಂದರೆಯಾಗುತ್ತಿದೆ. ಅಲ್ಲದೆ, ಯಾರ ಮರಗಳು ಯಾವ ರೈತರಿಗೆ ಸೇರಿದ್ದು ಎಂಬ ಕಾಳಜಿ ಇಲ್ಲದೆ ಎಲ್ಲವನ್ನೂ ಉರುಳಿಸಿ ರಾಶಿ ಹಾಕುತ್ತಿದ್ದಾರೆ. ಪರಿಹಾರವನ್ನೂ ಎಲ್ಲ ಜಾಗಕ್ಕೆ ನೀಡಿಲ್ಲ, ಪೈಪ್‌ಲೈನ್ ಬಿಟ್ಟು ಉಳಿದ ಜಾಗ ಬಿಟ್ಟುಕೊಡುತ್ತೇವಲ್ಲ ಎನ್ನುತ್ತಾರೆ” ಎಂದು ಭಟ್ ಹೇಳಿದರು. ಪೈಪ್‌ಲೈನ್ ಹಾದುಹೋಗುವ ಎಲ್ಲ ಪ್ರದೇಶದ ಜನರ ಸಮಸ್ಯೆಯೂ ಇದೇ ಆಗಿದೆ.

Related posts

Leave a Reply