Breaking News

ಗ್ರಾಮಸ್ಥರ ಒತ್ತಡಕ್ಕೆ ಮಣಿದು ನಿರ್ಣಯ ಬದಲು, ಉದ್ಯಾವರ ಗ್ರಾ.ಪಂ.ನಲ್ಲಿ ಸದಸ್ಯನೋರ್ವನ ವಿರುದ್ಧ ಗ್ರಾಮಸ್ಥರ ಕಿಡಿ


ಉದ್ಯಾವರದ ಫಿಶ್‌ಮಿಲ್‌ನ ಒಂದು ಪ್ರದೇಶವನ್ನು ಕೈಗಾರಿಕಾ ವಲಯವನ್ನಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಸಾರ್ವಜನಿಕರು ಇದರ ವಿರುದ್ದ ರೊಚ್ಚಿಗೆದ್ದಿದ್ದಾರೆ; ಅಷ್ಟೆ ಅಲ್ಲದೇ ಇದನ್ನ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಶ್‌ಮಿಲ್ ರೂವಾರಿಗಳು ಉದ್ಯಾವರದ ಒಂದು ಪ್ರದೇಶವನ್ನು ಕೈಗಾರಿಕಾ ವಲಯವನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಸಭೆಯ ಹಿಂದಿನ ದಿನ ನೀಡಿದ ಅರ್ಜಿಯೊಂದನ್ನು ನೀಡಿದ್ದರ ಪರ ಕಾರ್ಯಾಚರಿಸಿದ ಗ್ರಾ.ಪಂ. ಆಡಳಿತ ಮಂಡಳಿ, ಅರ್ಜಿಯ ಪರ ಬಹುಮತದ ನಿರ್ಣಯ ಕೈಗೊಂಡಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರ ಒತ್ತಾಯದ ಮೇರೆಗೆ ವಿಶೇಷ ಸಾಮಾನ್ಯ ಸಭೆ ನಡೆಸಿ ಅದರಲ್ಲಿ ಈ ಹಿಂದೆ ಕೈಗೊಂಡ ನಿರ್ಣಯವನ್ನು ಸರ್ವಾನುಮತದಲ್ಲಿ ರದ್ದುಗೊಳಿಸಲಾಯಿತು. ಪಿಶ್ ಮಿಲ್ಲುಗಳ ಸಮಸ್ಯೆಯಿಂದ ಉದ್ಯಾವರದ ಜನತೆ ಕಂಗೆಟ್ಟು ಹೋಗಿದ್ದು, ಈ ಹಿಂದೆ ಕೂಡಾ ಬಹಳಷ್ಟು ಹೋರಾಟಗಳು ನಡೆದು ಪೊಲೀಸರು ಲಾಠಿಛಾರ್ಜ್ ಮಾಡಿದ ಕಹಿ ನೆನಪು ಕೂಡಾ ಜನರ ಮುಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಗ್ರಾ.ಪಂ. ಆಡಳಿತ ಸಮಿತಿ ಫಿಶ್‌ಮಿಲ್ ಮಾಲಿಕರೊಂದಿಗೆ ಶಾಮೀಲಾಗಿದ್ದಾರೆ ಎಂಬ ಕಾರಣಕ್ಕೆ ಒಂದಾದ ಗ್ರಾಮಸ್ಥರು, ಆ ಬಳಿಕದ ಗ್ರಾ.ಪಂ. ಚುನಾವಣೆಯಲ್ಲಿ ಆ ಆಡಳಿತ ಸಮಿತಿಯನ್ನು ಚುನಾವಣೆಯಲ್ಲಿ ಸೋಲಿಸಿ, ಗ್ರಾ.ಪಂ.ನಲ್ಲಿ ಹೊಸ ಆಡಳಿತ ಸಮಿತಿ ರಚಿಸಲು ಅವಕಾಶ ಕಲ್ಪಿಸಿದ್ದು ಗ್ರಾಮದ ಜನರ ಸಾಮಾರ್ಥ್ಯಕ್ಕೆ ಹಿಡಿದ ಕೈಗನ್ನಡಿ.
ಈ ಘಟನೆಗಳು ಹಸಿಯಾಗಿರುವಾಗಲೇ ಇದೀಗ ಮತ್ತೊಂದು ಡೀಲ್ ನಡೆಯುತ್ತಿದೆ ಎಂಬ ಸುದ್ಧಿ ಜನರನ್ನು ಕಂಗೆಡಿಸಿದೆ. ಬರೋಬ್ಬರೀ ಒಂದು ಕೋಟಿ ಡೀಲ್ ಮಾಡಿಕೊಂಡು, ಕೆಲ ಸದಸ್ಯರಿಗೆ ಹಂಚಲು ಸದಸ್ಯನೋರ್ವ ಕಾರ್ಯಾಚರಿಸುತ್ತಿದ್ದಾನೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಇದಕ್ಕೆ ಪೂರಕವಾಗಿ ಕೈಗಾರಿಕ ವಲಯ ರಚಿಸಿ ಅದರಲ್ಲಿ ಎರಡು ಪಿಶ್‌ಮಿಲ್ ನಿರ್ಮಿಸಲು ಸಂಚೊಂದು ನಡೆಯುತ್ತಿದ್ದು, ಅದಕ್ಕೆ ೨೯ ಸದಸ್ಯರ ಪೈಕಿ ಹನ್ನೊಂದು ಮಂದಿ ಸದಸ್ಯರು ಅರ್ಜಿದಾರರ ಪರ ಬ್ಯಾಟಿಂಗ್ ನಡೆಸಿದ್ದಾರೆ.
ಇದರಲ್ಲಿ ಆರು ಮಂದಿ ವಿರೋಧಿಸಿದ್ದರು. ಹತ್ತು ಮಂದಿ ಸದಸ್ಯರು ತಟಸ್ಥರಾಗಿದ್ದರಿಂದ ಅರ್ಜಿದಾರರ ಪರವಾಗಿ ಬಹುಮತದ ನಿರ್ಣಯ ಹೊರ ಹುಮ್ಮಿತ್ತು. ಇದರಿಂದ ಕುಪಿತರಾದ ಗ್ರಾಮಸ್ಥರು ಗ್ರಾ.ಪಂ. ಸದಸ್ಯರನ್ನು ಭೇಟಿ ಮಾಡಿ ಈ ಹಿಂದಿನ ಘಟನೆಗಳನ್ನು ನೆನಪಿಸಿದರಿಂದ ಬದಲಾದ ೧೬ ಮಂದಿ ಸದಸ್ಯರು ಗ್ರಾ.ಪಂ. ಅಧ್ಯಕ್ಷರಿಗೆ ವಿಶೇಷ ಸಭೆ ನಡೆಸುವಂತೆ ಒತ್ತಾಯಿಸಿದ ಮೇರೆಗೆ ಮತ್ತೆ ಸಭೆ ನಡೆದು, ಈ ಹಿಂದಿನ ನಿರ್ಣಯವನ್ನು ಸರ್ವಾನುಮತದಿಂದ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ಈ ಮಧ್ಯೆಯೂ ಸದಸ್ಯ ಕಿರಣ್ ಕುಮಾರ್ ಸಹಿತ ನಾಲ್ವರು ನಾವು ಈ ವಿಚಾರವಾಗಿ ತಟಸ್ಥ ಎಂಬುದಾಗಿ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರಾದರೂ, ಮತ್ತೆ ಮನ ಪರಿವರ್ತನೆ ನಡೆಸಿದ ಆ ನಾಲ್ವರು ಸದಸ್ಯರೂ ಈ ಹಿಂದಿನ ಸಭೆಯ ನಿರ್ಣಯ ರದ್ದುಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿದರು. ಅದರೊಂದಿಗೆ ಕಾರ್ಯಚರಿಸುತ್ತಿರುವ ಇತರೇ ಫಿಶ್‌ಮಿಲ್ಲುಗಳನ್ನು ಮುಚ್ಚಿಸಲು ಕಾನೂನು ಹೋರಾಟವನ್ನು ಬಲಗೊಳಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂತು.

Related posts

Leave a Reply