ಪುತ್ತೂರು: ಬೇಸಿಗೆ ಕಾಲ ಬಂತೆಂದರೆ ದಿನಂಪ್ರತಿ ವಿದ್ಯುತ್ ಕಡಿತಗೊಂಡು ವಿವಿಧ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುವುದು ಹೆಚ್ಚಾಗಿ ಗ್ರಾಮೀಣ ಭಾಗದ ಜನರು. ಈ ಭಾಗದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಹೆಚ್ಚಾಗಿದ್ದು, ಇದರಿಂದಾಗಿ ಮನೆ ಕೆಲಸಕ್ಕೂ ತೊಂದರೆಯಾಗುವುದು ಸಹಜವಾಗಿದೆ. ಆಳವಾದ ಕೆರೆ, ಬಾವಿಗಳಿಂದ ನೀರೆತ್ತಲು ಪಂಪ್ಗಳ ಅನಿವಾರ್ಯತೆ ಹೆಚ್ಚಾಗಿದ್ದು, ವಿದ್ಯುತ್ ಇಲ್ಲದ ಸಂದರ್ಭದಲ್ಲಿ ನೀರಿದ್ದರೂ, ಪರದಾಡುವ ಸ್ಥಿತಿ ಎಲ್ಲಾ ಮನೆಗಳಲ್ಲೂ ಇರುತ್ತದೆ. ಇಂಥಹ ಪರಿಸ್ಥಿತಿಯನ್ನು ತಪ್ಪಿಸಲು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಯುವಕನೊಬ್ಬ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಬಳಸಿ ಮನೆಬಳಕೆಗೆ ಕೆರೆ, ಬಾವಿಯಿಂದ ನೀರೆತ್ತುವ ಪಂಪ್ ಚಲಾಯಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.