
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುತ್ತಿದೆ. ಹೀಗಾಗಿ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತೀ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಿಂಡಿ ಅಣೆಕಟ್ಟುಗಳನ್ನು ಗುರುತಿಸಿ ಅಲ್ಲಿರುವ ಹೂಳನ್ನು ಮೇಲೆತ್ತುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶೀಘ್ರವೇ ಕಾರ್ಯಪ್ರವೃತ್ತರಾಗಬೇಕು ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಮ್ ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.
ಕಳೆದ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ 70 ಕೋಟಿ ರೂ. ಹಣವನ್ನು ತಂದಿದ್ದು, ಈ ಬಾರಿ ಮುನ್ನೂರು ಕೋಟಿ ಹಣವನ್ನು ತಂದಿದ್ದೇನೆ. ಒಟ್ಟು ೩೭೦ಕೋಟಿ ಹಣ ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ ಮಂಜೂರು ಮಾಡಿದೆ. ಅಭಿವೃದ್ದಿ ಕಾರ್ಯಗಳು ನಡೆಯಬೇಕಿದ್ದರೆ ಮರಳು ಪ್ರಮುಖವಾಗಿ ಬೇಕಾಗುತ್ತದೆ. ಹೀಗಾಗಿ ಅಂತರ್ಜಲಮಟ್ಟ ಹೆಚ್ಚಿಸಲು ಕಿಂಡಿ ಅಣೆಕಟ್ಟುಗಳಲ್ಲಿ ತೆಗೆದಿರುವ ಹೂಳನ್ನು ಅಭಿವೃದ್ದಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು. ಇದಕ್ಕೆ ಪಂಚಾಯಿತಿ ಮೂಲಕ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕಾಮಗಾರಿಗೆ ಉಪಯೋಗಿಸಬಹುದಾದದ ಹೂಳನ್ನು ಯಾರ್ಡ್ನಲ್ಲಿ ಸಂಗ್ರಹಿಸಿ ಅಲ್ಲಿಂದ ಕಡಿಮೆ ಬೆಲೆ ವಿತರಿಸಬೇಕು. ಪ್ರತೀ ಯೂನಿಟ್ಗೆ ಎರಡುಸಾವಿರ ಬೆಲೆ ನಿಗಧಿಪಡಿಸಬೇಕು. ಈ ರೀತಿ ಮಾಡಿದರೆ ಬಡವರಿಗೂ ಮನೆ ಕಟ್ಟಿಕೊಳ್ಳಲು ಕಡಿಮೆ ಬೆಲೆಯಲ್ಲಿ ಮರಳು ಸಿಕ್ಕಂತಾಗುತ್ತದೆ. ಈ ಪ್ರಕ್ರಿಯೆ ಆದಷ್ಟು ಬೇಗ ಆಯಾ ಪಂಚಾಯಿತಿಗಳಲ್ಲಿ ಜಾರಿಗೊಳಿಸಬೇಕು ಎಂದು ಶಾಸಕ ಸುಕುಮಾರ ಶೆಟ್ಟಿ ಸೂಚನೆ ನೀಡಿದರು.
ಬೈಂದೂರು ವಿಧಾನಸಭಾ ವ್ಯಾಪಿಯಲ್ಲಿ ನಾಡ ಸೇರಿದಂತೆ ಹಲವೆಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದನ್ನು ನಾನು ಸಹಿಸಲ್ಲ. ಯಾರ್ಯಾರಿಗೋ ತಿನ್ನಲು ನಾನು ಬಿಡೋದಿಲ್ಲ. ಈ ಕೆಲಸ ಮುಂದೆ ನಡೆಯಬಾರದು. ನಮ್ಮ ಉದ್ದೇಶ ಬಡವರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತಾಗಬೇಕು ಎನ್ನುವುದು. ಎಲ್ಲೆಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆಯೋ ಮಾಹಿತಿ ಕಲೆ ಹಾಕಿ ಕೂಡಲೇ ಅದರ ವಿರುದ್ದ ಕ್ರಮಕೈಗೊಳ್ಳಿ ಎಂದು ಶಾಸಕ ಸುಕುಮಾರ್ ಶೆಟ್ಟಿ, ಗಣಿ ಮತ್ತು ಭೂ ವಿಜ್ಙಾನ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಸ್ಮಶಾನಗಳಿಲ್ಲ. ಗ್ರಾಮಲೆಕ್ಕಾಧಿಕಾರಿಗಳು ಸ್ಥಳ ಗುರುತಿಸಿದರೆ ಶಾಸಕರ ನಿಧಿಯಿಂದ ಮೂರು ಲಕ್ಷ ರೂ. ಹಣ ನೀಡುತ್ತೇನೆ. ಎಲ್ಲಿ ಸ್ಮಶಾನದ ಅವಶ್ಯವಿದೆಯೊ ಅಲ್ಲಿ ಸ್ಥಳ ಗುರುತಿಸಿ ನನ್ನ ಗಮನಕ್ಕೆ ತನ್ನಿ ಎಂದರು. ಎಲ್ಲಿ ರಿಕ್ಷಾ ನಿಲ್ದಾಣದ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ರಿಕ್ಷಾ ನಿಲ್ದಾಣಕ್ಕೆ ಮೂರು ಲಕ್ಷ ರೂ ಅನುದಾನವನ್ನು ಶಾಸಕ ನಿಧಿಯಿಂದ ಕೊಡುತ್ತೇನೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು.
ಬಡವರ ಬಗ್ಗೆ ಸ್ವಲ್ಪ ಕನಿಕರ ತೋರಿಸಿ ಎಂದ ಅವರು ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರನ್ನು ಮಾತಾಡಿಸಬಹುದು. ಆದರೆ ಗ್ರಾ.ಪಂ ಪಿಡಿಓಗಳನ್ನು ಮಾತನಾಡಿಸುವುದೇ ಕಷ್ಟವಾಗಿದೆ. ಕರೆ ಮಾಡಿದರೂ ಕರೆಯನ್ನೂ ಸ್ವೀಕರಿಸುತ್ತಿಲ್ಲ. ತಮ್ಮ ವರ್ತನೆಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಇದು ಇನ್ನು ಮುಂದೆ ನಡೆಯಕೂಡದು ಎಂದು ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅಕ್ರಮ ಗಣಿಗಾರಿಕೆಯ ಬಗ್ಗೆ ಪತ್ರಿಕೆಗಳಲ್ಲಿ ಬಂದ ಕೂಡಲೇ ದಾಳಿ ನಡೆಸಬೇಡಿ. ಕಲ್ಲು ಗಣಿಗಾರಿಕೆಯ ಕಷ್ಟ ಎಲ್ಲರಿಗೂ ತಿಳಿದಿದೆ. ಬಿಸಿಲಲ್ಲಿ ಬೆವರು ಸುರಿಸಿ ದುಡಿಯುತ್ತಾರೆ. ಅಂತವರಿಗೆ ಏನೂ ತೊಂದರೆಯಾಗಬಾರದೆನ್ನುವುದು ನನ್ನ ಪ್ರಾಮಾಣಿಕ ಕಳಕಳಿ. ಅಕ್ರಮ ನಡೆದಾಗ ದಾಳಿ ನಡೆಸುವುದು ನಿಮ್ಮ ಕರ್ತವ್ಯ. ಆದರೆ ಕಲ್ಲು ಗಣಿಗಾರಿಕೆಯ ಮೇಲೆ ದಾಳಿ ನಡೆಸುವುದಾದರೆ ನೋಡಿಕೊಂಡು ದಾಳಿ ನಡೆಸಿ ಎಂದು ಶಾಸಕ ಬಿಎಮ್ ಸುಕುಮಾರ್ ತಿಳಿಸಿದರು. ಸಭೆಯಲ್ಲಿ ಬೈಂದೂರು ತಹಸೀಲ್ದಾರ್ ಬಸವರಾಜ್ ಪೂಜಾರ್, ಕುಂದಾಪುರ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ಇಓ ಭಾರತಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಸಹಾಯಕ ನಿದೇರ್ಶಕ ರಾಮ್ ಜಿ ನಾಯ್ಕ್ ಇದ್ದರು.