Header Ads
Breaking News

ಚರಂಡಿ ಕುಸಿದ ಪರಿಣಾಮ ರಸ್ತೆಯೂ ಕುಸಿತ : ರಸ್ತೆ ಕಾಮಗಾರಿ ನಡೆಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿರುವ ತೂಮಿನಾಡು ಲಕ್ಷಾಂವೀಡು ಕಾಲನಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಚರಂಡಿ ಕುಸಿದು ಬಿದ್ದ ಪರಿಣಾಮ ರಸ್ತೆಯೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಘಟನೆ ನಡೆದು ಎರಡು ತಿಂಗಳುಗಳೇ ಕಳೆದರೂ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಳ್ಳದೇ ಇರುವುದು ವಿಪರ್ಯಾಸ.

ಅನಧಿಕೃತ ಮರಳು ಸಾಗಾಟದ ಟಿಪ್ಪರ್ ಲಾರಿಗಳ ರಂಪಾಟದಿಂದ ಈ ಚರಂಡಿ ಕುಸಿದಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಲಘು ವಾಹನ ಸಾಗಲು ನಿರ್ಮಿಸಲಾದ ರಸ್ತೆಯಲ್ಲಿ ಮರಳನ್ನು ಹೇರಿಕೊಂಡು ಸಾಗುತ್ತಿರುವ ಘನ ವಾಹನಗಳು ಸಂಚರಿಸಿ ಇದೀಗ ರಸ್ತೆಯೇ ಕುಸಿದು ಬಿದ್ದಿದೆ. ಪರಿಶಿಷ್ಟ ಜಾತಿ ಹಾಗು ಪಂಗಡ ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿಗಳ ಶಾಲಾ ವಾಹನಗಳು ಸಂಚರಿಸುವ ಏಕೈಕ ರಸ್ತೆಯಾಗಿದೆ ಇದು.

ಇದೀಗ ಈ ರಸ್ತೆಯ ಚರಂಡಿ ಕುಸಿದಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ವಾಹನಗಳು ಕೂಡಾ ಬರದೇ ಇರುವ ಹಿನ್ನೆಲೆಯಲ್ಲಿ ಪೋಷಕರು ವಿದ್ಯಾರ್ಥಿಗಳನ್ನು ಸಂಪರ್ಕವಿರುವ ಹತ್ತಿರದ ರಸ್ತೆಗೆ ನಡೆಸಿಕೊಂಡೇ ಕೊಂಡೊಯ್ಯಬೇಕಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವಿಲ್ಲದ ಕಾರಣ ಸ್ಥಳೀಯರು ಈಗಾಗಲೇ ಗ್ರಾ.ಪಂ. ಅಧಿಕೃತರ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ಇಲ್ಲವಾದ ಕಾರಣ ಮುಂದಿನ ದಿನಗಳಲ್ಲಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ನಡೆಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *