Header Ads
Breaking News

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಸಿದ್ಧತೆ: ಸಹಾಯಕ ಚುನಾವಣಾಧಿಕಾರಿ ಸಂತೋಷ್ ಮಾಹಿತಿ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಯು ಎಪ್ರಿಲ್-2019 ರಂದು ನಡೆಯಲಿರುವುದು. ಚುನಾವಣೆಯನ್ನು ಪಾರದರ್ಶಕವಾಗಿ, ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಂತೋಷ್ ತಿಳಿಸಿದರು.

ಸಾರ್ವತ್ರಿಕ ಲೋಕಸಭಾ ಚುನಾವಣೆಯ 2019 ಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರ, ಕಾರ್ಕಳ-122 ರಲ್ಲಿ 96694 ಮಹಿಳಾ ಮತದಾರರು, 87106-ಪುರುಷ ಮತದಾರರು ಹಾಗೂ 2771-ಯುವ ಮತದಾರರು ಸೇರಿ ಒಟ್ಟು 184571 ಮಂದಿ ಮತದಾರರಿದ್ದಾರೆ. ತಾಲೂಕಿನ 209 ಮತಗಟ್ಟೆಗಳಲ್ಲಿ 140 ಸಾಮಾನ್ಯ ಮತಗಟ್ಟೆಗಳು, 21-ಸೂಕ್ಷ್ಮ ಮತಗಟ್ಟೆಗಳು ಹಾಗೂ 48-ನಕ್ಸಲೈಟ್ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿರುತ್ತದೆ. ಚುನಾವಣೆಯನ್ನು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಮತದಾರರ ಗುರುತಿನ ಚೀಟಿ ಹಾಗೂ ಮತಗಟ್ಟೆ ಅಧಿಕಾರಿಯಾಗಿ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಒಟ್ಟು 209 ಮತಗಟ್ಟೆ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿರುತ್ತಾರೆ.

ಚುನಾವಣಾ ದಿನಾಂಕ ನಿಗದಿಯಾದಂದೇ ನೀತಿ-ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ತಾಲೂಕು ಮಟ್ಟದ ನೀತಿ-ಸಂಹಿತೆ ಅಧಿಕಾರಿಯಾಗಿ ಶ್ರೀ ಮೇಜರ್ ಹರ್ಷ ಕೆ. ಬಿ., ಕಾರ್ಯ ನಿರ್ವಹಣಾ ಅಧಿಕಾರಿ, ತಾಲೂಕು ಪಂಚಾಯತ್, ಕಾರ್ಕಳ ಇವರನ್ನು ಮಾನ್ಯ ಜಿಲ್ಲಾಧಿಕಾರಿಯವರು ನೇಮಿಸಿ ಆದೇಶವನ್ನು ಹೊರಡಿಸಿರುತ್ತಾರೆ.

ನೀತಿ-ಸಂಹಿತೆ ಜಾರಿಯಲ್ಲಿದ್ದರೂ ಸಹಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ಅಡ್ಡಿ-ಆತಂಕ ಇರುವುದಿಲ್ಲ. ಧಾರ್ಮಿಕ ಕೇಂದ್ರಗಳ ವಠಾರದ ಒಳಗೆ ಬ್ಯಾನರ್, ಬಂಟಿಂಗ್ಸ್ ಕಟ್ಟಲು ಅವಕಾಶ ಇದ್ದು, ಆದರೆ ಯಾವುದೇ ರಾಜಕೀಯ ವ್ಯಕ್ತಿಗಳು ಶುಭ ಕೋರುವ ಬ್ಯಾನರ್ ಗಳನ್ನು ಅಳವಡಿಸಲು ಅವಕಾಶವೇ ಇಲ್ಲ. ಸಾರ್ವಜನಿಕ ಸ್ಥಳ ಮತ್ತು ರಸ್ತೆ ಬದಿಗಳಲ್ಲಿ ಯಾವುದೇ ಬ್ಯಾನರ್, ಬಂಟಿಂಗ್ಸ್ ಗಳನ್ನು ಕಟ್ಟುವಂತಿಲ್ಲ. ಸಾರ್ವಜನಿಕರು ನಡೆಸುವ ಧಾರ್ಮಿಕ ಹಾಗೂ ಕೌಟುಂಬಿಕ ಕಾರ್ಯಕ್ರಮಗಳ ಬಗ್ಗೆ ಸಹಾಯಕ ಚುನಾವಣಾ ಅಧಿಕಾರಿಯವರ ಕಛೇರಿಯಲ್ಲಿ ತೆರೆಯಲಾಗಿರುವ ಏಕ-ಗವಾಕ್ಷಿ ನಿಯಂತ್ರಣಾ ವ್ಯವಸ್ಥೆಯ ಮೂಲಕ ಪೂರ್ವಾನುಮತಿಯನ್ನು ಪಡೆದು, ಕಾರ್ಯಕ್ರಮವನ್ನು ನಡೆಸಿ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *