Header Ads
Header Ads
Breaking News

ಜಡ್ಕಲ್ ಕೊಡೆಪಾಲ್ ನಿವಾಸಿಗಳಿಗೆ ವ್ಯಾಘ್ರನ ಭೀತಿ! ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಬಲಿ

ಜಡ್ಕಲ್ ಕೊಡಪಾಲ್‌ನಲ್ಲಿ ಕಾಡು ಪ್ರಾಣಿಗಳ ಭೀತಿ ದಿನದಿಂದ ದಿನ ಹೆಚ್ಚಾಗತೊಡಗಿದೆ. ಮನೆ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ತಡರಾತ್ರಿ ಕಾಡು ಪ್ರಾಣಿಯೊಂದು ದಾಳಿ ನಡೆಸಿದ ಪರಿಣಾಮ ಹಸು ಸಾವನ್ನಪ್ಪಿರುವ ಘಟನೆ ಜಡ್ಕಲ್ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡೆಪಾಲ್ ಎಂಬಲ್ಲಿ ನಡೆದಿದೆ.ಕೊಡೆಪಾಲ್ ಕೋಡಿಮನೆ ನಿವಾಸಿ ಕೃಷಿಕ ಅರ್ಮ ಎಂಬವರಿಗೆ ಸೇರಿದ್ದ ಹಸು ಕಾಡು ಪ್ರಾಣಿ ದಾಳಿಗೆ ಬಲಿಯಾಗಿದೆ.

ಅರ್ಮ ಮನೆ ಸಮೀಪವಿರುವ ತೆರೆದ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿ ಹಾಕಲಾಗಿತ್ತು. ಗುರುವಾರ ರಾತ್ರಿ ಕಾಡುಪ್ರಾಣಿ ದಾಳಿ ನಡೆಸಿ ಹಸುವಿನ ಬೆನ್ನಿನ ಭಾಗವನ್ನು ತಿಂದು ಪರಾರಿಯಾಗಿದೆ. ಬೆಳಿಗ್ಗೆ ಮನೆಯವರು ನೋಡುವಾಗ ಘಟನೆ ಬೆಳಕಿಗೆ ಬಂದಿದೆ. ಸಮೀಪದ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಳಿಕ ದನದ ಅವಶೇಷವನ್ನು ಹೂತು ಹಾಕಲಾಗಿದೆ.

ಈ ಭಾಗದಲ್ಲಿ ಹದಿನೈದು ಮನೆಗಳಿದ್ದು, ಎಲ್ಲರೂ ಕೃಷಿ, ಹೈನುಗಾರಿಕೆಯನ್ನು ಅವಲಂಭಿಸಿಕೊಂಡಿದ್ದೇವೆ. ಕೊಲ್ಲೂರು ಮೂಕಾಂಬಿಕಾ ಅಭಯಾರಣುಕ್ಕೆ ತಾಗಿಕೊಂಡೆ ಈ ಕೇರಿ ಇರುವುದರಿಂದ ನಾವು ಬೆಳೆದ ಬೆಳೆಗಳು ಕಾಡುಪ್ರಾಣಿಗಳ ಹಾವಳಿಯಿಂದಾಗಿ ನಾಶವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಕೃಷಿಕ ಆನಂದ ಶೆಟ್ಟಿ.

ಇನ್ನು ಕೃಷಿ ಮತ್ತು ಹೈನುಗಾರಿಕೆಯೇ ನಮಗೆ ಆಧಾರ. ನಾ ವೆಲ್ಲರೂ ಬಟ್ಟೆ ತೊಳೆಯಲು ನದಿ ನೀರನ್ನೇ ಅವಲಂಭಿಸಿಕೊಂಡಿದ್ದೇವೆ. ಮಹಿಳೆಯರು ಬಟ್ಟೆ ತೊಳೆಯಲು ಹೋಗುವಾಗ ಆತಂಕದಲ್ಲೇ ಹೋಗಿ ಬರುತ್ತಾರೆ. ಆದಷ್ಟು ಬೇಗ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿದು ನಮ್ಮ ಆತಂಕವನ್ನು ದೂರ ಮಾಡಬೇಕು ಎನ್ನುತ್ತಾರೆ ದನ ಕಳೆದುಕೊಂಡ ಸಂತ್ರಸ್ತ ರಾಘವೇಂದ್ರ ಕೋಡಿಮನೆ.ಒಟ್ಟಿನಲ್ಲಿ ನದಿ ತೀರದಲ್ಲಿ ಹುಲಿ ಓಡಾಟ ನಡೆಸಿರುವ ಹೆಜ್ಜೆ ಗುರುತುಗಳು ಕಾಣಸಿಕ್ಕಿದ್ದು, ಸ್ಥಳೀಯ ಜನರನ್ನು ಆತಂಕಕ್ಕೀಡು ಮಾಡಿದೆ. ಇನ್ನಾದರೂ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಜನರ ಆತಂಕ ದೂರ ಮಾಡಲಿ ಎನ್ನುವುದೇ ನಮ್ಮ ಆಶಯ

Related posts

Leave a Reply

Your email address will not be published. Required fields are marked *