Header Ads
Breaking News

ಜನವರಿ 21ರಂದು ನಡೆಯಲಿರುವ ಕಲಶಾಭಿಷೇಕ ಹಿನ್ನೆಲೆ : ಪಚ್ಚಿನಡ್ಕದಲ್ಲಿ ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಜ.21 ರಂದು ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಲಿರುವ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಸ್ವಾಮಿ ಕೊರಗಜ್ಜ ದೈವದ ನೂತನ ಶಿಲಾಬಿಂಬದ ಮೆರವಣಿಗೆ ನಡೆಯಿತು.

ಗೋರೆಮಾರ್ ಕೊರಗಜ್ಜ ಕಟ್ಟೆಯಿಂದ ದೈವದ ಸಾನಿಧ್ಯದ ವರೆಗೆ ನಡೆದ ಶೋಭಾಯಾತ್ರೆ ಮೆರವಣಿಗೆಗೆ ಕೊಳಲು, ಬ್ಯಾಂಡ್, ಡೋಲು, ವಾದ್ಯದ ಹಿಮ್ಮೇಳ, ಗೊಂಬೆ ಕುಣಿತ ವಿಶೇಷ ಮೆರುಗು ನೀಡಿತು. ಅಪಾರ ಸಂಖ್ಯೆಯಲ್ಲಿ ಕೊರಗಜ್ಜ ದೈವದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಪುರೋಹಿತರಾದ ಲೋಕೆಶ್ ಶಾಂತಿ, ಉದ್ಯಮಿಗಳಾದ ಸೇಸಪ್ಪ ಕೋಟ್ಯಾನ್, ಸದಾನಂದ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಕುರಿಯಾಳ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಮೊದಲಾದವರು ಉಪಸ್ಥಿತರಿದ್ದರು.

ಈ ನಡುವೆ ಕೊರಗಜ್ಜ ದೈವದ ಶಿಲಾಮಯ ಗುಡಿ ಕೇವಲ ಎಂಟು ದಿನಗಳಲ್ಲಿ ನಿರ್ಮಾಣಗೊಂಡು ಅಚ್ಚರಿಗೆ ಕಾರಣವಾಗಿದೆ. ಬಂಟ್ವಾಳದ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಮತ್ತವರ ತಂಡ ಕೊರಗಜ್ಜ ದೈವಕ್ಕೆ ಸುಂದರವಾದ ಶಿಲಾಮಯ ಗರ್ಭಗುಡಿಯನ್ನು ನಿರ್ಮಿಸಿಕೊಟ್ಟು ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದ ಶ್ರೀ ರಕ್ತೇಶ್ವರೀ ಗುಡಿಯನ್ನು 24 ದಿನಗಳಲ್ಲಿ ನಿರ್ಮಿಸಿದ್ದರು. ಇದೀಗ 8 ದಿನಗಳಲ್ಲಿ ಕೊರಗಜ್ಜ ದೈವದ ಗುಡಿ ನಿರ್ಮಿಸಿದ್ದಾರೆ. 10 ಮಂದಿ ಕಾರ್ಮಿಕರ ಸಹಕಾರದೊಂದಿಗೆ ಗುಡಿ ನಿರ್ಮಾಣ ಕಾರ್ಯ ಸಾಕಾರಗೊಂಡಿದೆ. ಗುಡಿಯ ನಿರ್ಮಾಣಕಾರ್ಯದಲ್ಲಿ ಮೇಸ್ತ್ರೀ ರಮೇಶ್ ಆರ್ ಲಾಯಿಲ ಹಾಗೂ ಮರದ ಕೆಲಸಗಳಲ್ಲಿ ನಾಗೆಂದ್ರ ಆಚಾರ್ಯ ಸಹಕರಿಸಿದ್ದಾರೆ. ಕೊರಗಜ್ಜನ ಶಿಲಾಮಯ ಮೂರ್ತಿಯನ್ನು ಬಸ್ತಿ ಸದಾಶಿವ ಶೆಣೈ ಅವರೇ ಕೆತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಗುಡಿ ನಿರ್ಮಾಣಗೊಂಡಿರುವುದು ಕೊರಗಜ್ಜ ದೈವದ ಕಾರಣಿಕ ಎಂದೇ ನಂಬಲಾಗಿದೆ.

Related posts

Leave a Reply

Your email address will not be published. Required fields are marked *