Header Ads
Header Ads
Breaking News

ಜಮ್ಮುವಿನ ಬನಿಹಾಳ್ ಬಳಿ ಕಂದಕಕ್ಕೆ ಉರುಳಿದ ಬಸ್, 16 ಜನ ಅಮರನಾಥ ಯಾತ್ರಿಗಳ ಸಾವು, 27 ಜನರಿಗೆ ಗಾಯ

ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಆಳವಾದ ಕಂದಕಕ್ಕೆ ಬಸ್ ಉರುಳಿದ ಪರಿಣಾಮ ೧೬ ಮಂದಿ ಅಮರನಾಥ ಯಾತ್ರಾರ್ಥಿಗಳು ಸಾವಿಗೀಡಾಗಿದ್ದು, ೨೭ ಮಂದಿ ಗಾಯಗೊಂಡಿದ್ದಾರೆ.
ಜಮ್ಮುನಿಂದ ಶ್ರೀನಗರದತ್ತ ತೆರಳುತ್ತಿದ್ದಾಗ ರಾಂಬನ್ ಜಿಲ್ಲೆಯ ಬನಿಹಾಳ್ ಸಮೀಪದ ನಾಚಿಲನ ಪ್ರದೇಶದಲ್ಲಿನ ಸೇನಾ ಶಿಬಿರವೊಂದರ ಬಳಿ ಸುಮಾರು ೧೫೦ ಅಡಿ ಆಳದ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ. ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್, ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಂದಕಕ್ಕೆ ಉರುಳಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ತೀವ್ರ ಗಾಯಗೊಂಡಿರುವ ೧೯ ಯಾತ್ರಾರ್ಥಿಗಳನ್ನು ವಿಶೇಷ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಜಮ್ಮುಗೆ ಸಾಗಿಸಲಾಗಿದೆ.
ಮೃತಪಟ್ಟವರು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಅಸ್ಸಾಂ, ಹರಿಯಾಣ ಮತ್ತು ಮಧ್ಯಪ್ರದೇಶಕ್ಕೆ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಅಪಘಾತಕ್ಕೀಡಾದ ಮಾಹಿತಿ ತಿಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ದೇಹಗಳನ್ನು ಕಂದಕದಿಂದ ಹೊರತೆಗೆಯಲು ಮತ್ತು ಗಾಯಗೊಂಡವರನ್ನು ರಕ್ಷಿಸಲು ನೆರವಾದರು. ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸಹ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

Related posts

Leave a Reply