Breaking News

ಜಾನುವಾರು ಮಾರಾಟ ನಿಷೇಧ ಕೇಸರೀಕರಣದ ಅಜೆಂಡಾ, ಪುತ್ತೂರಿನಲ್ಲಿ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್


ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾನುವಾರು ಮಾರಾಟ ನಿಷೇಧಕ್ಕೆ ಮುಂದಾಗಿರುವುದು ಜಾತ್ಯಾತೀತತೆಯನ್ನು ಮುರಿದು ದೇಶವನ್ನು ಕೇಸರೀಕರಣ, ಹಿಂದುತ್ವದ ರಾಷ್ಟ್ರ ಮಾಡುವ ಅಜೆಂಡಾದ ಒಂದು ಭಾಗ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೆ. ಆರೋಪಿಸಿದ್ದಾರೆ.
ದೇಶದಾದ್ಯಂತ ಜಾನುವಾರು ಮಾರಾಟ ನಿಷೇಧಿಸಿದ ಕೇಂದ್ರ ಸರಕಾರದ ಕ್ರಮವನ್ನು ಹಾಗೂ ತೆಲಂಗಾಣದಲ್ಲಿ ನಡೆದ ಚರ್ಚ್ ದಾಳಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರದ ಬಸ್ ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ಆಯೋಜಿಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದ ಗೋ ಮಾರಾಟ ನಿಷೇಧ ಎಂಬುದು ಬೂಟಾಟಿಕೆಯ ಕ್ರಮ, ಇದು ಗೋವಿನ ಮೇಲಿನ ನೈಜ ಕಾಳಜಿ ಅಲ್ಲ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರದ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಕ್ರಮವಾಗಿ ಈ ವಿಚಾರಕ್ಕೆ ಮುಂದೆ ತರಲಾಗಿದೆ ಎಂದು ಆರೋಪಿಸಿದರು. ಯಾವುದೇ ಆಹಾರ ಕ್ರಮವನ್ನು ವಿರೋಧಿಸುವ ಅಧಿಕಾರ ಯಾರಿಗೂ ಇಲ್ಲ. ನಮಗೆ ಹಸಿವಾದಾಗ ಗೋವನ್ನು ಆಹಾರವಾಗಿ ಬಳಸುತ್ತೇವೆ. ಅದನ್ನು ತಡೆಯಲು ದೇಶದ ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಗೋ ಮಾಂಸಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಸರಕಾರಕ್ಕೆ ೨ ಸಾವಿರ ಕೋಟಿ ರೂ. ಗೋಮಾಂಸ ರಫ್ತಿನಿಂದ ಆದಾಯ ಬರುತ್ತಿದ್ದು, ಭಾರತ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ ಪ್ರಮುಖ ರಫ್ತು ಕಸಾಯಿಖಾನೆಗಳು ಬ್ರಾಹ್ಮಣರ ಮಾಲಕತ್ವದಲ್ಲಿ ನಡೆಯುತ್ತಿವೆ. ಸರಕಾರಕ್ಕೆ ತಾಕತ್ತಿದ್ದರೆ ಗೋವಿನ ಮಾಂಸ ರಫ್ತನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು. ಧಾರ್ಮಿಕ ಗ್ರಂಥ ಮನುಸ್ಮೃತಿಯ ೫ ನೇ ಅಧ್ಯಾಯದಲ್ಲಿ ಮಾಂಸಾಹಾರ ಸೇವನೆಯ ಕುರಿತಂತೆ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ವಿರೋಧಿಸಿದವರು ಅದನ್ನು ಮೊದಲು ಓದಬೇಕು. ಇದರಲ್ಲಿ ಮಾಂಸವನ್ನು ತಿನ್ನದವರು ಸತ್ತರೆ ೨೧ ಜನ್ಮ ಪಶುವಾಗಿ ಹುಟ್ಟುತ್ತಾರೆ ಎಂದು ಉಲ್ಲೇಖಿಸಲಾಗಿದೆ. ನಮ್ಮ ಸಹೋದರ ಬಾಂಧವರು ಈ ರೀತಿ ಹುಟ್ಟದೇ ಇರಲು ಗೋಮಾಂಸವನ್ನು ಸೇವಿಸಲೇ ಬೇಕು. ಕೇಂದ್ರ ಸರಕಾರ ಕೂಡಲೇ ಇಂತಹ ನಿಯಮವನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯ ಸರಕಾರ ಗೋಮಾಂಸ ಸೇವಿಸುವವರಿಗೆ ಸೂಕ್ತ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದ.ಸಂ.ಸ. ಪುತ್ತೂರು ತಾಲೂಕು ಸಂಚಾಲಕ ಆನಂದ ಮಿತ್ತಬಲು, ಎಸ್‌ಡಿಪಿಐನ ಅಲಾನ್ಸೋ ಫ್ರಾಂಕೋ, ಇಕ್ಬಾಲ್ ಬೆಳ್ಳಾರೆ, ಇಕ್ಬಾಲ್ ಬಳ್ಳಮಂಜ, ಉಮ್ಮರ್, ನವಾಝ್ ಉಪಸ್ಥಿತರಿದ್ದರು.

Related posts

Leave a Reply