Header Ads
Header Ads
Breaking News

ಜಾನುವಾರು ಸಾಕಾಣಿಕಾ ಕೇಂದ್ರದಂತಾದ ಠಾಣೆ

ಬಂಟ್ವಾಳ: ಮೂರು ದನ, ಎರಡು ಕರು… ಎರಡು ಬಕೆಟು ನೀರು. ಅಲ್ಲಲ್ಲಿ ಸೆಗಣಿ, ಹರಡಿಕೊಂಡಿರುವ ಒಣ ಹುಲ್ಲು.. ಇದು ಯಾವುದೋ ಕೃಷಿಕನ ಮನೆಯ ಹಟ್ಟಿಯಲ್ಲಿ ಕಂಡು ಬಂದ ದೃಶ್ಯವಲ್ಲ, ಬದಲಿಗೆ ಕಳೆದ ಕೆಲವು ದಿನಗಳಿಂದ ಬಿ.ಸಿ.ರೋಡಿನ ನಗರ ಪೊಲೀಸ್ ಠಾಣೆಯಲ್ಲಿ ಕಂಡು ಬರುತ್ತಿರುವ ದೃಶ್ಯ.ಹೌದು, ಬಿ.ಸಿ.ರೋಡಿನ ನಗರ ಠಾಣೆಯ ಆವರಣ ಅಕ್ಷರಶಃ ಜಾನುವಾರು ಸಾಕಾಣಿಕೆಯ ಹಟ್ಟಿಯಂತಾಗಿದೆ. ಅಕ್ರಮ ಗೋಸಾಗಾಟಗಾರಿಂದ ರಕ್ಷಿಸಿ ತಂದ ದನಗಳನ್ನು ಗೋಆಶ್ರಮದಲ್ಲಿ ಸ್ವೀಕರಿಸದೇ ಇರುವುದರಿಂದ ಪೊಲೀಸರಿಗೆ ದನ ಸಾಕುವ ಹೆಚ್ಚುವರಿ ಜವಬ್ದಾರಿ ಸಿಕ್ಕಿದೆ!ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳ ತಾಲೂಕು ವ್ಯಾಪ್ತಿಯ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಮಾಂಸಕ್ಕೆ ಕಡಿಯಲು ತಂದಿದ್ದ ಗೋವುಗಳನ್ನು ಪೊಲಿಸರು ರಕ್ಷಣೆ ಮಾಡಿದ್ದಾರೆ. ಹೀಗೆ ಕಟುಕರ ಕೈಯಿಂದ ರಕ್ಷಿಸಿದ ಗೋವುಗಳನ್ನು ಬಳಿಕ ಗೋಶಾಲೆಗಳಿಗೆ ನೀಡುವುದು ಈ ಹಿಂದಿನಿಂದಲೂ ನಡೆದು ಕೊಂಡು ಬಂದ ಪದ್ದತಿ.

  ಆದರೆ ಈ ಗೋವುಗಳನ್ನು ಫಜೀರುವಿನ ಗೋಶಾಲೆಗೆ ನೀಡಲು ಕೊಂಡೊಯ್ದಾಗ ಅಲ್ಲಿ ಈಗಾಗಲೇ ಬಂದಿರುವ ಸಾಕಷ್ಟು ದನಗಳು ಇದ್ದು ಈ ಜಾನುವಾರುಗಳನ್ನು ಸ್ವೀಕರಿಸದೇ ನಿರಾಕರಿಸಿದ ಕಾರಣ ವಾಪಸ್ಸು ಠಾಣೆಗೆ ತರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸದ್ಯಕ್ಕೆ ನೀರು, ಬೈ ಹುಲ್ಲು ಹಾಕಿ ಜಾಗೃತೆ ಮಾಡಿಕೊಂಡಿರುವ ಪೊಲೀಸರು ದನಗಳನ್ನು ಮುಂದೇನು ಮಾಡುವುದು ಎಂದು ದಿಕ್ಕು ತೋಚದಂತಾಗಿದ್ದಾರೆ. ಕಸಾಯಿಖಾನೆಗಳಿಂದ ರಕ್ಷಿಸಿ ತಂದ ಜಾನುವಾರುಗಳನ್ನು ಗೋ ಆಶ್ರಮದಲ್ಲಿ ನಿರಾಕರಿಸಿದರೆ ಏನು ಮಾಡುವುದು ? ಎಲ್ಲಿ ಕಟ್ಟಿ ಹಾಕುವುದು ಎನ್ನುವ ಸವಾಲು ಪೊಲೀಸರಿಗೆ ಎದುರಾಗಿದೆ. ಈ ಹಿಂದೆಲ್ಲಾ ಅಕ್ರಮ ಗೋ ಸಾಗಾಟ ಅಥವಾ ಕಸಾಯಿಖಾನೆಗಳಿಂz ರಕ್ಷಿಸಿ ತಂದ ದನಗಳನ್ನು ನಗರ ಠಾಣೆಯ ಹಿಂಭಾಗದಲ್ಲಿರುವ ಮರದ ಬುಡದಲ್ಲಿ ಕಟ್ಟಲಾಗುತ್ತಿತ್ತು.

ಬಳಿಕ ಗೋಶಾಲೆಗೆ ಹಸ್ತಾಂತರಿಸಲಾಗುತ್ತಿತ್ತು. ಆದರೆ ಈಗ ಮಳೆಯಿಂದ ರಕ್ಷಿಸಲು ನಗರ ಠಾಣೆಯ ಮುಖ್ಯ ಪ್ರವೇಶ ದ್ವಾರದ ಬಳಿಯಲ್ಲಿಯೇ ದನ ಹಾಗೂ ಕರುಗಳನ್ನು ಕಟ್ಟಿ ಹಾಕಲಾಗಿದೆ. ಅದು ಅಲ್ಲಿಯೇ ಮಲ – ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ನಾತದೊಟ್ಟಿಗೆ ಸೊಳ್ಳೆ ಕಾಟವೂ ಪೊಲೀಸರನ್ನು ಕಾಡಲಾರಂಭಿಸಿದೆ. ಹಗಲು ರಾತ್ರಿ, ಕರ್ತವ್ಯ ಮಾಡುವುದರೊಂದಿಗೆ ದನಗಳನ್ನು ಕಾಯುವ ಕೆಲಸ ಮಾಡಬೇಕಾಗಿದೆ ಎನ್ನುವುದು ಇಲ್ಲಿನ ಪೊಲೀಸರ ಅಳಲು. ಆದರೂ ತಮ್ಮ ಕೆಲಸದ ಜೊತೆಗೆ ಪ್ರತೀ ಹೊತ್ತಿಗೆ ಗೋವುಗಳಿಗೆ ನೀರು, ಹುಲ್ಲು ನೀಡಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ.

Related posts

Leave a Reply