Header Ads
Header Ads
Header Ads
Breaking News

ಜಿಲ್ಲಾ ಮಟ್ಟದ ಮಕ್ಕಳ ಯಕ್ಷಗಾನ ಸ್ಪರ್ಧೆ ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಆಯೋಜನೆ ಸೆ.9 ರಂದು ನಡೆಯಲಿರುವ ಕಾರ್ಯಕ್ರಮ

 

ಪುತ್ತೂರು: ಹದಿನೈದು ವರ್ಷದೊಳಗಿನ ಮಕ್ಕಳ ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ಧೆ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ ೯ರಂದು ನಡೆಯಲಿದೆ.

ಪುತ್ತೂರಿನಲ್ಲಿ ಇದೇ ಮೊದಲ ಬಾರಿ ಇಂಥದೊಂದು ಸ್ಪರ್ಧೆ ನಡೆಯುತ್ತಿದ್ದು, ತೆಂಕುತಿಟ್ಟಿನ ಯಕ್ಷಗಾನ ಪ್ರಕಾರದಲ್ಲಿ ಈ ಸ್ಪರ್ಧೆಯನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಪ್ರಸ್ತುತ ಬೆಳ್ಳಿ ಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿ ಅದರ ಪ್ರಯುಕ್ತ ಈ ವಿಶಿಷ್ಟ ಸ್ಪರ್ಧೆ ಏರ್ಪಡಿಸಲಾಗಿದೆ. ನಮ್ಮ ಶಾಲೆಯ ತಂಡ ಈ ಸ್ಪರ್ಧೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ. ಕೇವಲ ಒಂದು ಪ್ರದರ್ಶನ ಮಾತ್ರ ಶಾಲೆಯ ತಂಡದಿಂದ ಇರಲಿದೆ ಎಂದು ಮಕ್ಕಳ ಯಕ್ಷಗಾನ ಸ್ಪರ್ಧಾ ಕಾರ್ಯಕ್ರಮದ ಸಂಯೋಜಕರಾದ ಚಂದ್ರಶೇಖರ್ ಸುಳ್ಯ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಆಹ್ವಾನಿತ ತಂಡಗಳ ನಡುವಿನ ಸ್ಪರ್ಧೆಯಾಗಿದೆ. ಜಿಲ್ಲೆಯ ನಾನಾ ಭಾಗಗಳಿಂದ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಇವುಗಳ ನಡುವೆ ಸ್ಪರ್ಧೆ ಏರ್ಪಡಲಿದೆ. ನುರಿತ ಯಕ್ಷಗಾನ ಕಲಾವಿದರನ್ನು ಒಳಗೊಂಡ ತೀರ್ಪುಗಾರರ ಮಂಡಳಿ ರಚಿಸಲಿದೆ. ವಿವೇಕಾನಂದ ಶಾಲೆಯಲ್ಲಿ ಕಳೆದ ೧೨ ವರ್ಷಗಳಿಂದ ಚಾಲ್ತಿಯಲ್ಲಿರುವ ಯಕ್ಷ ಚಿಣ್ಣರ ಬಳಗದ ವತಿಯಿಂದ ಸ್ಪರ್ಧಾ ಕಾರ್ಯಕ್ರಮದ ಕೊನೆಯಲ್ಲಿ ಒಂದು ಗಂಟೆಯ ಯಕ್ಷಗಾನ ಪ್ರದರ್ಶನ ಇರಲಿದೆ ಎಂದವರು ನುಡಿದರು.

ಪ್ರತೀ ತಂಡಕ್ಕೆ ಮುಕ್ಕಾಲು ಗಂಟೆಯ ಅವಕಾಶ ನೀಡಲಾಗಿದೆ. ತೆಂಕು ತಿಟ್ಟಿನ ಪ್ರದರ್ಶನಕ್ಕೆ ಮಾತ್ರ ಅವಕಾಶ. ಕನ್ನಡ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಪ್ರದರ್ಶನ ಮಾಡಬಹುದು ಎಂಬ ನಿಯಮ ವಿಧಿಸಲಾಗಿದೆ. ಈಗಾಗಲೇ ಎಲ್ಲ ಆರು ತಂಡಗಳು ತಮ್ಮ ತಮ್ಮ ಪ್ರಸಂಗಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಒಂದು ತಂಡದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ಸೇರಿ ಗರಿಷ್ಠ ೧೧ ಕಲಾವಿದರು ಇರಬಹುದು. ಹಿಮ್ಮೇಳವನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಹೀಗಾಗಿ ಭಾಗವತಿಕೆ, ಚೆಂಡೆ, ಮದ್ದಳೆ ಇತ್ಯಾದಿ ಹಿಮ್ಮೇಳಕ್ಕೆ ಹಿರಿಯ ಕಲಾವಿದರು ಸೇರಿಕೊಳ್ಳಬಹುದು. ಮುಮ್ಮೇಳ ಕಲಾವಿದರು ಮಾತ್ರ ೧೫ ವರ್ಷದೊಳಗಿನ ಮಕ್ಕಳಾಗಿರಬೇಕು. ಅವರ ವಯಸ್ಸಿನ ದಾಖಲೆಪತ್ರವನ್ನು ಪಡೆದುಕೊಳ್ಳಲಾಗುತ್ತದೆ ಎಂದರು.

ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ನೀಡಲಾಗುತ್ತದೆ. ಜತೆಯಲ್ಲಿ ಶಿರೋಫಲಕ, ಪ್ರಮಾಣಪತ್ರ ಇರುತ್ತದೆ. ಭಾಗವಹಿಸಿದ ಎಲ್ಲ ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಇದರಲ್ಲದೆ ಐದು ವೈಯಕ್ತಿಕ ಬಹುಮಾನಗಳಿವೆ. ಉತ್ತಮ ಸ್ತ್ರೀವೇಷ, ಉತ್ತಮ ಬಣ್ಣದ ವೇಷ, ಉತ್ತಮ ಹಾಸ್ಯ ವೇಷ, ಉತ್ತಮ ಕಿರೀಟ ವೇಷ ಮತ್ತು ಉತ್ತಮ ಪುಂಡು ವೇಷ ಎಂಬ ವಿಭಾಗಗಳಲ್ಲಿ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ. ಹಾಗೆಂದು ಪ್ರತೀ ತಂಡದ ಪ್ರದರ್ಶನದಲ್ಲಿ ಈ ಐದು ಬಗೆಯ ವೇಷಗಳು ಇರಲೇಬೇಕೆಂಬ ಕಡ್ಡಾಯವೇನಿಲ್ಲ. ಕೆಲವೊಂದು ಪ್ರಸಂಗಗಳಲ್ಲಿ ಈ ಐದೂ ಬಗೆಯ ವೇಷಗಳ ಅಗತ್ಯತೆ ಇರುವುದಿಲ್ಲ. ಹೀಗಾಗಿ ಈ ಆಯ್ಕೆಯನ್ನು ತಂಡಗಳಿಗೆ ಬಿಟ್ಟು ಕೊಡಲಾಗುತ್ತದೆ. ನಾಟ್ಯ, ರಂಗ ನಡೆ, ಮಾತುಗಾರಿಕೆ, ಅಭಿನಯ ಹಾಗೂ ಒಟ್ಟು ಪರಿಣಾಮ ಈ ಐದು ಅಂಶಗಳನ್ನು ಗಮನಿಸಿಕೊಂಡು ಅಂಕಗಳನ್ನು ನೀಡಲಾಗುವುದು. ಕೇವಲ ಒಬ್ಬ ಕಲಾವಿದರ ಮೇರು ಪ್ರದರ್ಶನವಷ್ಟೇ ತಂಡಕ್ಕೆ ಬಹುಮಾನ ತಂದು ಕೊಡುವುದಿಲ್ಲ ಎಂದರು.

ತಂಡಗಳು ಯಾವುದೇ ವೇಷ ಭೂಷಣ, ಹಿಮ್ಮೇಳ ಪರಿಕರ ತರಬೇಕಾಗಿಲ್ಲ. ಎಲ್ಲವನ್ನೂ ಶಾಲೆಯೇ ಒದಗಿಸುತ್ತದೆ. ಮಕ್ಕಳಿಗೆ ವೇಷ ಹಾಕಿ ಸಜ್ಜುಗೊಳಿಸುವ ವ್ಯವಸ್ಥೆ ಇದೆ. ವೇದಿಕೆಯನ್ನೂ ಯಕ್ಷಗಾನದ ರಂಗಸ್ಥಳ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದರು.

ಸೆ. ೯ರಂದು ಬೆಳಗ್ಗೆ ೯ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತದೆ. ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಉದ್ಘಾಟಿಸುತ್ತಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷತೆ ವಹಿಸುತ್ತಾರೆ. ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್ ಗೌರವ ಉಪಸ್ಥಿತಿ ಇರಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ೧೦ ಗಂಟೆಯವರೆಗೆ ಸ್ಪರ್ಧೆಗಳು ನಡೆಯುತ್ತದೆ. ೪ ಗಂಟೆಯಿಂದ ೫ ಗಂಟೆಯವರೆಗೆ ಯಕ್ಷ ಚಿಣ್ಣರ ಬಳಗದ ಬಾಲ ಕಲಾವಿದರಿಂದ ಒಂದು ಗಂಟೆಯ ಯಕ್ಷಗಾನ ಪ್ರದರ್ಶನ ಇರಲಿದೆ. ಇದಾದ ಬಳಿಕ ಐದು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕೋಡಿಂಬಾಡಿ ರೈ ಎಸ್ಟೇಟ್ ಮಾಲೀಕರಾದ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುತ್ತಾರೆ. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕ ನಾರಾಯಣ ಚಂಬಲ್ತಿಮಾರ್ ಅಧ್ಯಕ್ಷತೆ ವಹಿಸುತ್ತಾರೆ. ಪಡುಮಲೆ ಕೋಟಿ ಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನಾ ಪ್ರತಿಷ್ಠಾನದ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸಂಚಾಲಕ ವಿನೋದ್ ಕುಮಾರ್ ರೈ, ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಶಾಲೆಯ ಯಕ್ಷ ಚಿಣ್ಣರ ಬಳಗದ ಅಧ್ಯಕ್ಷ ಪದ್ಮನಾಭ್, ಸದಸ್ಯ ಶಂಕರ ಭಟ್ ಉಪಸ್ಥಿತರಿದ್ದರು.

Related posts

Leave a Reply