Breaking News

ಜಿ‌ಎಸ್‌ಟಿಯಿಂದ ಕರ್ನಾಟಕದ ಒಣದ್ರಾಕ್ಷಿಗೆ ಹೊಡೆತ, ತೆರಿಗೆ ಎರಡರಿಂದ ಐದು ಶೇಕಾಡಾಕ್ಕೆ ಏರಿಕೆ

ಸರಕು ಮತ್ತು ಸೇವಾ ತೆರಿಗೆ ಜಿ‌ಎಸ್ಟಿ ಅನುಷ್ಠಾನಕ್ಕೆ ಮುನ್ನವೇ ಒಣ ದ್ರಾಕ್ಷಿಯ ಬೆಲೆ ಕುಸಿದಿದ್ದು, ಜುಲೈ ೧ರ ಬಳಿಕ ಇನ್ನಷ್ಟು ಕುಸಿಯುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.
ಕರ್ನಾಟಕದಲ್ಲಿ ಒಣದ್ರಾಕ್ಷಿಗೆ ಸದ್ಯಕ್ಕೆ ಶೇ. ೨ ಮೌಲ್ಯವರ್ಧಿತ ತೆರಿಗೆ ಇತ್ತು. ಇದೀಗ ಜಿ‌ಎಸ್ಟಿ ಮಂಡಳಿಯು ಶೇ. ೫ ತೆರಿಗೆ ನಿರ್ಧರಿಸಿದ್ದು, ರಾಜ್ಯದ ಅಂದಾಜು ೨೦ ಸಾವಿರ ಒಣದ್ರಾಕ್ಷಿ ಉತ್ಪಾದಕರನ್ನು ಆತಂಕಕ್ಕೆ ದೂಡಿದೆ. ವಿಜಯಪುರ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಒಣ ದ್ರಾಕ್ಷಿ ಬೆಲೆ ರೂ. ೬೨ರಿಂದ ೯೦ಕ್ಕೆ ನಿಗದಿಗೊಂಡರೆ, ಮಹಾರಾಷ್ಟ್ರದ ಸಾಂಗ್ಲಿ, ತಾಸ್ಕಗಾಂವ್ ಮಾರುಕಟ್ಟೆಯಲ್ಲಿ ರೂ. ೯೦ರಿಂದ ೧೩೦ರಂತೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಒಣದ್ರಾಕ್ಷಿ ವಹಿವಾಟಿಗೆ ತೆರಿಗೆ ವಿಧಿಸದೇ ಇರುವುದರಿಂದ ಅಲ್ಲಿ ಬೆಳೆಗಾರರಿಗೆ ಹೆಚ್ಚಿನ ದರವೇ ಸಿಗುತ್ತದೆ ಎಂದು ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ಎಸ್. ನಾಂದ್ರೇಕರ ತಿಳಿಸಿದ್ದಾರೆ.
ಒಣದ್ರಾಕ್ಷಿಯೂ ಜಿ‌ಎಸ್ಟಿ ವ್ಯಾಪ್ತಿಗೆ ಬಂದಿದ್ದು ಹೇಳಿಕೊಳ್ಳಲಾಗದ ನೋವು. ಆದರೂ ಇನ್ನು ಮುಂದೆ ದೇಶದ ಎಲ್ಲೆಡೆ ಒಂದೇ ತೆರಿಗೆ ನಿಗದಿಯಾಗಲಿರುವುದರಿಂದ ಹೊರ ರಾಜ್ಯದ ವ್ಯಾಪಾರಿಗಳು ನಮ್ಮತ್ತ ಬಂದರೆ ಬೆಲೆ ಏರಿಕೆಯಾಗಬಹುದು. ಈ ನಿಟ್ಟಿನಲ್ಲಿ ಬೆಳೆಗಾರರ ಸಂಘವು ಎಪಿ‌ಎಂಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಹೊರ ರಾಜ್ಯಗಳ ವ್ಯಾಪಾರಿಗಳನ್ನು ಆಹ್ವಾನಿಸಲು ನಿರ್ಧರಿಸಿದೆ. ಇದರ ಜತೆಯಲ್ಲೇ ಆನ್ಲೈನ್ ವಹಿವಾಟಿಗೆ ಚಾಲನೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಿದೆ ಎಂದು ನಾಂದ್ರೇಕರ ಹೇಳುತ್ತಾರೆ.

Related posts

Leave a Reply