Breaking News

ಜಿ.ಎಸ್.ಟಿ.ಯಿಂದ ಕಾರು, ಸ್ಮಾರ್ಟ್ ಫೋನು ಅಗ್ಗ, ಎಸಿ ಹೋಟೆಲ್ ಊಟ ದುಬಾರಿ

ಜುಲೈನಲ್ಲಿ ಜಿ‌ಎಸ್ಟಿ ಜಾರಿಯಾದ ನಂತರ ಸಣ್ಣ ಕಾರು, ಸ್ಮಾರ್ಟ್ಫೋನ್, ದಿನಬಳಕೆ ವಸ್ತುಗಳು ಅಗ್ಗವಾಗಲಿವೆ. ಆದರೆ, ಟಿವಿ, ಎಸಿ ವಾಷಿಂಗ್ ಮಷಿನ್, ರೆಫ್ರಿಜರೇಟರ್ ದುಬಾರಿಯಾಗಲಿವೆ.
ಜಿ‌ಎಸ್ಟಿ ಮಂಡಳಿ ಇತ್ತೀಚೆಗೆ ೧,೨೦೦ ಸರಕು ಮತ್ತು ೫೦೦ ಸೇವೆಗಳ ತೆರಿಗೆ ದರಗಳನ್ನು ವಿಶ್ಲೇಷಣೆ ನಡೆಸಿದೆ. ಅದರಂತೆ ಸಾಬೂನು, ಟೂತ್ಪೇಸ್ಟ್, ಸಾಮಾನ್ಯ ದರ್ಜೆಯ ವಿಮಾನ ಪ್ರಯಾಣ ತುಸು ಅಗ್ಗವಾಗಲಿವೆ. ತಾಜಾ ತರಕಾರಿ, ಹಣ್ಣು, ಹಾಲು, ಬ್ರೆಡ್, ಬೇಳೆಕಾಳುಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಶೂನ್ಯ ದರಗಳ ದಿನಸಿಗಳ ಗುಂಪಿಗೆ ಸೇರಿಸಿರುವ ಕಾರಣ ಆಹಾರ ಧಾನ್ಯಗಳು ಕೂಡ ಅಗ್ಗವಾಗಲಿವೆ. ಅದೇ ರೀತಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೂ ವಿನಾಯ್ತಿ ನೀಡಲಾಗಿದೆ. ರಿಯಲ್ ಎಸ್ಟೇಟ್ ವಲಯವನ್ನು ಜಿ‌ಎಸ್ಟಿಯಿಂದ ಹೊರಗಿಡಲಾಗಿದ್ದರೂ ನಿರ್ಮಾಣ ಹಂತದ ಆಸ್ತಿಗಳ ಮೇಲೆ ಶೇ. ೧೨ರಷ್ಟು ತೆರಿಗೆ ದರ ನಿಗದಿಗೊಳಿಸಲಾಗಿದೆ. ಪ್ರಸಕ್ತ ಶೇ. ೧೫ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಶೇ. ೨೨ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸಂಸ್ಕರಿತ ಆಹಾರ, ಮಿಠಾಯಿ, ಐಸ್ ಕ್ರೀಂಗಳು ಶೇ.?೧೮ರ ತೆರಿಗೆ ವ್ಯಾಪ್ತಿಗೆ ಒಳಪಡುವ ಕಾರಣ ಅವು ಅಗ್ಗವಾಗಲಿವೆ. ಶೇ. ೨೨ರ ತೆರಿಗೆ ವ್ಯಾಪ್ತಿಯಿಂದ ಶೇ. ೨೮ರ ತೆರಿಗೆ ವ್ಯಾಪ್ತಿಗೆ ಸೇರಿದ ಶ್ಯಾಂಪೂ, ಸುಗಂಧದ್ರವ್ಯ, ಪ್ರಸಾಧನ ಸಾಮಗ್ರಿ ದುಬಾರಿಯಾಗಲಿವೆ. ಟಾಕ್ಸಿ ಸೇವೆಯ ಮೇಲೆ ವಿಧಿಸಲಾಗುತ್ತಿದ್ದ ಶೇ. ೬ರಷ್ಟು ತೆರಿಗೆಯನ್ನು ಶೇ. ೫ಕ್ಕೆ ಇಳಿಸಲಾಗಿದ್ದು ಇನ್ನು ಮುಂದೆ ಟ್ಯಾಕ್ಸಿಗಳು ತುಸು ಅಗ್ಗವಾಲಿವೆ. ಪೂಜೆ ಮತ್ತು ಹವನದ ಸಾಮಗ್ರಿಗಳು, ಕುಂಕುಮ, ಬಿಂದಿಗಳಿಗೆ ಜಿ‌ಎಸ್ಟಿ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ.
ಪಂಚತಾರಾ ಹೋಟೆಲ್ಗಳ ಮೇಲಿನ ತೆರಿಗೆ ದರ ಶೇ. ೨೮ ಹೆಚ್ಚಲಿದ್ದು ಮತ್ತಷ್ಟು ದುಬಾರಿಯಾಗಲಿವೆ. ಆದರೆ, ಹವಾನಿಯಂತ್ರಿತ ವ್ಯವಸ್ಥೆ ಹೊಂದಿರದ ಹೋಟೆಲ್ಗಳ ಮೇಲಿನ ತೆರಿಗೆಯನ್ನು ಶೇ. ೧೨ ಗಣನೀಯವಾಗಿ ಇಳಿಸಲಾಗಿದೆ. ಜಿ‌ಎಸ್ಟಿಯಲ್ಲಿ ಆಯುರ್ವೇದ ಔಷಧಿ ಮತ್ತು ಉತ್ಪನ್ನಗಳ ಮೇಲೆ ಶೇ. ೧೨ರಷ್ಟು ತೆರಿಗೆ ವಿಧಿಸಲಾಗಿದೆ. ಸದ್ಯದ ತೆರಿಗೆ ವ್ಯವಸ್ಥೆಯಲ್ಲಿ ಈ ಉತ್ಪನ್ನಗಳ ಮೇಲೆ ವ್ಯಾಟ್ ಸೇರಿ ಶೇ. ೭ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

Related posts

Leave a Reply