Header Ads
Breaking News

ಜೂನ್ 15 ಮತ್ತು 16ರಂದು ಪುತ್ತೂರಿನಲ್ಲಿ “ಹಲಸು ಸಾರ ಮೇಳ” ಕಾರ್ಯಕ್ರಮ

ಹಲಸು ಸ್ನೇಹ ಸಂಗಮ ಪುತ್ತೂರು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ‘ಹಲಸು ಸಾರ ಮೇಳ’ವು 2019 ಜೂನ್ 15 ಶನಿವಾರ ಮತ್ತು 16 ರವಿವಾರದಂದು ಜರುಗಲಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಶ್ರೀ ನಟರಾಜ ವೇದಿಕೆ’ಯಲ್ಲಿ ಮೇಳ ನಡೆಯಲಿದೆ ಎಂದು ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ ಎ.ಪಿ. ಮರಿಕೆ ತಿಳಿಸಿದರು.

ಅವರು ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇಳದ ಬಗ್ಗೆ ಮಾಹಿತಿ ನೀಡಿದರು. ಸುಮಾರು ಮೂವತ್ತಕ್ಕೂ ಮಿಕ್ಕಿ ಮಳಿಗೆಗಳಲ್ಲಿ ತಾಜಾ ಹಲಸಿನ ಉತ್ಪನ್ನಗಳ ಮಾರಾಟವಿದೆ. ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ.

ಹಲಸು ಸ್ನೇಹ ಸಂಗಮದ ಆಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ಟರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಐಐಹೆಚ್‍ಆರ್ ಇದರ ನಿರ್ದೇಶಕ ಡಾ.ದಿನೇಶ್ ಇವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಸಹಾಯಕ ಕಮಿಶನರ್ ಕೃಷ್ಣಮೂರ್ತಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್, ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಇದರ ಕೃಷ್ಣನಾರಾಯಣ ಮುಳಿಯ, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ, ನಗರಸಭಾ ಸದಸ್ಯರಾದ ಶಕ್ತಿಸಿಂಹ ಭಾಗವಹಿಲಿರುವರು.

ಬಳಿಕ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ ‘ಹಲಸಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ’ – ದೇಶ ವಿದೇಶಗಳ ಆಗುಹೋಗುಗಳ ಚಿತ್ರಣಗಳ ಪವರ್‍ಪಾಯಿಂಟ್ ಪ್ರಸ್ತುತಿ ಜರುಗಲಿದೆ. ಜೂನ್ 16ರಂದು ಪೂರ್ವಾಹ್ನ ಗಂಟೆ 10ಕ್ಕೆ ಪೆರ್ಲದ ಕೃಷಿಕ ಶಿವಪ್ರಸಾದ್ ವರ್ಮುಡಿ ಇವರಿಂದ ‘ಹಲಸಿನ ಕೃಷಿ’ ಕುರಿತ ಅನುಭವ ಕಥನ ಮತು ಪ್ರಶ್ನೋತ್ತರ; ನಳಿನಿ ಮಾಯಿಲಂಕೋಡಿ ಮತ್ತು ಎ.ಪಿ.ಉಮಾಶಂಕರಿ ಮರಿಕೆ ಇವರಿಂದ ಅಡುಗೆ ಖಾದ್ಯಗಳ ಪ್ರಾತ್ಯಕ್ಷಿಕೆಯೊಂದಿಗೆ ಸಂಪನ್ನವಾಗಲಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹಲಸು ಸ್ನೇಹ ಸಂಗಮದ ಸದಸ್ಯರಾದ ಸತೀಶ್, ಅಧ್ಯಕ್ಷರಾದ ಸೇಡಿಯಾಪು ಜನಾರ್ದನ ಭಟ್, ಪುತ್ತೂರು ಜೆಸಿಐ ಘಟಕದ ಅಧ್ಯಕ್ಷರಾದ ಗೌತಮ ರೈ, ಕಾರ್ಯದರ್ಶಿ ಶಶಿರಾಜ್ ರೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *