Header Ads
Header Ads
Breaking News

ಜ.5: ರಾಜ್ಯಪಾಲ ವಜೂಬಾಯಿ ವಾಲಾರಿಂದ ದಡ್ಡಲಕಾಡು ಶಾಲೆಯ ಮೇಲಂತಸ್ತಿನ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ತಾಲೂಕಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ದತ್ತು ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಟ್ಟದ ಉದ್ಘಾಟನಾ ಸಮಾರಂಭ ಜನವರಿ 5ರಂದು ನಡೆಯಲಿದ್ದು, ಕರ್ನಾಟಕ ರಾಜ್ಯಪಾಲ ವಜೂಬಾಯಿ ವಾಲಾ ಅವರಿಂದ ಲೋಕಾರ್ಪಣೆಗೊಳಿಸಲಿದ್ದಾರೆ.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿ ಶಾಲೆಯನ್ನು ಉಳಿಸಿದ್ದು ಮಾತ್ರವಲ್ಲದೆ ದತ್ತು ಸಂಸ್ಥೆಯೊಂದು ಸರಕಾರದ ನಯಾಪೈಸೆ ಅನುದಾನ ಪಡೆಯದೆ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು ಸರಕಾರಿ ಶಾಲೆಯೊಂದಕ್ಕೆ ನಿರ್ಮಿಸಿ ಕೊಟ್ಟಿರುವುದು ರಾಜ್ಯದಲ್ಲೇ ಪ್ರಥಮ. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದಡ್ಡಲಕಾಡು ಶಾಲೆಯನ್ನು ದತ್ತು ಸ್ವೀಕರಿಸಿದ ಬಳಿಕ ಹಂತ ಹಂತವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾದ ಕಾರಣ ಹೊಸ ಕಟ್ಟಡ ನಿರ್ಮಾಣದ ಅನಿವಾರ್ಯತೆ ಉಂಟಾಯಿತು.

 

ಅದರಂತೆ ಸುಮಾರು 1.20 ಕೋಟಿ ರುಪಾಯಿ ವೆಚ್ಚದಲ್ಲಿ ದಾನಿಗಳ ನೆರವು ಪಡೆದುಕೊಂಡು 8 ಕೊಠಡಿಗಳ ಮೊದಲ ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದು  2017 ಮೇ 22ರಂದು ಕೇಂದ್ರದ ಅಂಕಿ ಅಂಶಗಳ ಖಾತೆ ಸಚಿವರಾಗಿದ್ದ ದಿ. ಅನಂತ ಕುಮಾರ್ ಅವರು ಉದ್ಘಾಟಿಸಿದ್ದರು. ಬಳಿಕ ಮತ್ತೆ ವಿದ್ಯಾರ್ಥಿಗಳ ದಾಖಲಾತಿ ಅಧಿಕ ಗೊಂಡಿದ್ದು ಎಲ್ಲಾ ವಿದ್ಯಾರ್ಥಿಗಳು ಒಂದೇ ಕಟ್ಟಡದಲ್ಲಿ ವಿದ್ಯಭ್ಯಾಸ ಪಡೆಯುವ ನಿಟ್ಟಿನಲ್ಲಿ 1 ಕೋಟಿ  ರೂಪಾಯಿ ವೆಚ್ಚದಲ್ಲಿ 16 ಹೆಚ್ಚುವರಿ ಕೊಠಡಿಗಳ ಮೇಲಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದ್ದು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ.

ಹೊಸ ಕಟ್ಟಡಕ್ಕೆ ತಾಗಿಕೊಂಡೇ  11 ಕೊಠಡಿಗಳ ಮತ್ತೊಂದು ಕಟ್ಟಡ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಕರ್ನಾಟಕ ರಾಜ್ಯಪಾಲ ವಜೂಬಾಯಿ ವಾಲಾ ಅವರು ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.

Related posts

Leave a Reply