Header Ads
Header Ads
Breaking News

ಟಿಪ್ಪರ್ ಮುಷ್ಕರ ಸ್ಥಳಕ್ಕೆ ಸಂಸದೆ ಶೋಭಾ ಕರಾಂದ್ಲಾಜೆ ಭೇಟಿ

 

ಕುಂದಾಪುರ: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಮರಳು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಟಿಪ್ಪರ್ ಮುಷ್ಕರ ನಡೆಯುತ್ತಿದ್ದು, ಎರಡನೆ ದಿನವಾದ ಶುಕ್ರವಾರ ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಾಂದ್ಲಾಜೆಯವರನ್ನು ಟಿಪ್ಪರ್ ಮಾಲಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಲ್ಲಿನ ಕೋಟೇಶ್ವರದಲ್ಲಿ ನಡೆದಿದೆ.ಮರಳು ಸಮಸ್ಯೆ ಶೀಘ್ರವೇ ಇತ್ಯರ್ಥಗೊಳಿಸುವಂತೆ ಕೋಟೇಶ್ವರ, ಕುಂದಾಪುರ ಹಾಗೂ ಹೆಮ್ಮಾಡಿಯಲ್ಲಿ ಗುರುವಾರದಿಂದ ಟಿಪ್ಪರ್ ಮಾಲಕರು ತಮ್ಮ ಟಿಪ್ಪರ್‌ಗಳನ್ನು ರಾ.ಹೆದ್ದಾರಿ ಬದಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಶುಕ್ರವಾರ ಬೈಂದೂರು ಕ್ಷೇತ್ರದಲ್ಲಿ ಶಿವಮೊಗ್ಗ ಲೋಕಸಭೆಯ ಉಪಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಕೋಟೇಶ್ವರದಲ್ಲಿ ನಡೆಯುತ್ತಿರುವ ಟಿಪ್ಪರ್ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದರು.ಸಂಸದೆ ಕರಾಂದ್ಲಾಜೆ ಕಾರಿನಿಂದ ಕೆಳಕ್ಕಿಳಿಯುತ್ತಲೇ ಮುಷ್ಕರ ನಿರತ ಟಿಪ್ಪರ್ ಮಾಲಕರಲ್ಲಿ ನೆರಳಿಗೆ ಬರಲು ಸೂಚಿಸಿದ್ದರು. ಈ ವೇಳೆಯಲ್ಲಿ ಆಕ್ರೋಶಿತಗೊಂಡ ಟಿಪ್ಪರ್ ಮಾಲಕರು ಸಂಸದೆಗೆ ಘೇರಾವ್ ಹಾಕಿ ನಾವು ನೆರಳಿಗೆ ಬರೋದಿಲ್ಲ. ನಮ್ಮ ಸಮಸ್ಯೆ ಆಲಿಸಲು ನೀವೆ ನಮ್ಮ ಬಳಿ ಬನ್ನಿ. ಯಾವಾಗ ಮರಳು ಸಮಸ್ಯೆಯನ್ನು ಬಗೆಹರಿಸುತ್ತೀರಿ. ಜಿಲ್ಲೆಯಲ್ಲ್ಲಿ ನಮ್ಮದೇ ಶಾಸಕರಿದ್ದಾರೆ. ನಮ್ಮವರೇ ಎಮ್‌ಎಲ್‌ಸಿ ಇದ್ದಾರೆ. ನಮ್ಮದೇ ಸಂಸದರಿದ್ದಾರೆ. ನೀವು ಅಧಿಕಾರಕ್ಕೆ ಬರಲು ನಾವೂ ಕೂಡ ಸಾಕಷ್ಟು ಶ್ರಮಿಸಿದ್ದೇವೆ. ಸಾಕಷ್ಟು ಹೋರಾಟ ನಡೆಸಿದ್ದೇವೆ. ಆದರೆ ನೀವು ನಮ್ಮ ಬಗ್ಗೆ ಕಿಂಚಿತ್ ಗಮನ ಹರಿಸುತ್ತಿಲ್ಲ. ನಿಮಗೆ ಸಾಧ್ಯವಾಗದಿದ್ದರೆ ನೇರವಾಗಿ ಹೇಳಿ ನಾವೇ ರಸ್ತೆಯಲ್ಲಿ ಕೂತು ಉಗ್ರವಾಗಿ ಪ್ರತಿಭಟಿಸುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆದರೂ ನಮ್ಮನ್ನು ದೂರಬೇಡಿ. ಸತತ ಎರಡು ವರ್ಷಗಳಿಂದ ಮರಳಿಲ್ಲದೆ ನಾವೆಲ್ಲರೂ ಪರದಾಡುತ್ತಿದ್ದೇವೆ. ಬ್ಯಾಂಕ್‌ಗಳಲ್ಲಿ ಸಾಲಾ ಮಾಡಿ ಟಿಪ್ಪರ್‌ಗಳನ್ನು ಖರೀದಿಸಿದ್ದೇವೆ. ನಮಗೆ ಬ್ಯಾಂಕ್‌ನ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ನಾವು ಬದುಕವುದು ಬೇಡವಾ ಎಂದು ತಮ್ಮದೇ ಪಕ್ಷದ ಸಂಸದೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನಾವಳಿ ನಡೆಯಿತು. ಟಿಪ್ಪರ್ ಮಾಲಕರು ಸಂಸದೆ ಶೋಭಾ ಕರಂದ್ಲಾಜೆಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿಯವರ ವಿರುದ್ದವೂ ಹರಿಹಾಯ್ದರು. ಸಂಸದೆ ಸ್ಥಳದಿಂದ ತೆರಳಲು ಕಾರಿನೊಳಗೆ ಕೂತಾಗಲೂ ಕಾರನ್ನು ಸುತ್ತುವರಿದ ಪ್ರತಿಭಟನಾನಿರತರು ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೆಲಕ್ಷಣ ತೀವ್ರ ತರಾಟೆಗೆ ತೆಗೆದುಕೊಂಡರು.

Related posts

Leave a Reply