Header Ads
Header Ads
Breaking News

ಟಿಪ್ಪರ್ ಲಾರಿಗಳಿಗೆ ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಸಮಸ್ಯೆ ಜಿಲ್ಲಾಡಳಿತ ಪರಿಹರಿಸದಿದ್ದರೆ ರಸ್ತೆಗಿಳಿದು ಪ್ರತಿಭಟನೆ

 

ಕುಂದಾಪುರ ತಾಲೂಕಿನಾದ್ಯಂತ ಸುಮಾರು 500 ಟಿಪ್ಪರ್ ಲಾರಿಗಳು ಸರಕು ಸಾಗಾಣಿಕೆಯಲ್ಲಿ ತೊಡಗಿದ್ದು, ಇತ್ತೀಚೆಗಿನ ದಿನಗಳಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಅಧಿಕಾರಿಗಳ ಅನಗತ್ಯ ಕಿರುಕುಳ ಹೆಚ್ಚಾಗುತ್ತಿದೆ. ಟಿಪ್ಪರ್ ಲಾರಿಗಳನ್ನು ಕಂಡ ತಕ್ಷಣ ಇಲಾಖೆಯವರು ಯಾವುದೋ ಒಂದು ಮಹಾ ಅಪರಾಧ ಮಾಡಿದಂತೆ ಟಿಪ್ಪರ್ ಲಾರಿ ತಡೆ ಹಿಡಿದು ಚಾಲಕ ಮತ್ತು ಕಾರ್ಮಿಕರಿಗೆ ಹಿಂಸೆ ನೀಡುವುದು, ಮಾಲೀಕರನ್ನು ಸ್ಥಳಕ್ಕೆ ಕರೆಯಿಸಿ ವಿನಾ ಕಾರಣ ತನಿಖೆಯ ನೆಪದಲ್ಲಿ ತೊಂದರೆ ಕೊಡುವ ವ್ಯವಸ್ಥೆ ನಿರಾಂತಕವಾಗಿ ನಡೆಯುತ್ತಿದೆ. ಎರಡುವರೆ ವರ್ಷದಿಂದ ಈ ಕಿರುಕುಳವನ್ನು ಸಹಿಸಿಕೊಂಡು ಬಂದಿದ್ದು ಇವತ್ತು ಟಿಪ್ಪರ್ ಮಾಲಕರು ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದ್ದು ಪೊಲೀಸ್ ಹಾಗೂ ಇತರ ಇಲಾಖೆಯ ದಬ್ಬಾಳಿಕೆಯನ್ನು ಜಿಲ್ಲಾಡಳಿತ ನಿಯಂತ್ರಿಸದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಟಿಪ್ಪರ್‌ಗಳನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಕುಂದಾಪುರ ಟಿಪ್ಪರ್ ಮಾಲಕರ ಸಂಘದ ಅಧ್ಯಕ್ಷ ಗುಣಾಕರ ಶೆಟ್ಟಿ ಹೇಳಿದರು.

ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಕಾನೂನಾತ್ಮಕ ವ್ಯವಸ್ಥೆ ನಿರ್ಮಾಣ ಮಾಡಿಕೊಡಲಿ. ದೊಡ್ಡ ದೊಡ್ಡ ಗುತ್ತಿಗೆದಾರರ ಹಾಗೂ ನಿರ್ಮಾಣ ಕಂಪೆನಿಗಳ ಟಿಪ್ಪರ್‌ಗಳನ್ನು ಕೇಳಲು ಇಲಾಖೆಗಳು ಮುಂದಾಗುವುದಿಲ್ಲ. ದಿನಕ್ಕೊಂದು ಬಾಡಿಗೆ ಮಾಡುವ ನಮ್ಮನ್ನು ಮಾತ್ರ ಅಡ್ಡ ಹಾಕುತ್ತಾರೆ. ನಾವು ಜನರ ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತೇವೆ. ಹಾಗಾಗಿ ಸ್ವೀಡ್ ಗವರ್ನರ್ ಆಗಲಿ, ಜಿ.ಪಿ‌ಎಸ್ ಆಗಲಿ ಅಗತ್ಯವಿರುವುದಿಲ್ಲ. ಇಷ್ಟಾಗಿಯೂ ಇಲಾಖೆಗಳು ಅನಾವಶ್ಯಕವಾಗಿ ಅಡ್ಡಗಟ್ಟಿ ಕಿರುಕುಳ ನೀಡಲಾಗುತ್ತಿರುವುದು ದುರಾದೃಷ್ಟಕರ ಎಂದರು.

ಟಿಪ್ಪರ್ ಮಾಲಕರು, ಎಪಿ‌ಎಂಸಿ ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಇದಕ್ಕೆಲ್ಲ ಜಲ್ಲಾಡಳಿತವೇ ನೇರ ಹೊಣೆ. ಈ ಸಮಸ್ಯೆಯನ್ನು ಸರಿಪಡಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಈಗ ಮರಳುಗಾರಿಕೆಯಲ್ಲಿ ದಿನಕ್ಕೆ ೫ ಪರ್ಮಿಟ್ ಮಾತ್ರ ನೀಡಲಾಗಿದೆ. ಒಂದೆಡೆ ಚಾಲಕರು ಭಯದ ವಾತಾವರಣದಲ್ಲಿ ಇರಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಜಿಲ್ಲಾಡಳಿತ ಸೂಚಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ರಮೇಶ ಕುಂದರ್, ಕಾರ್ಯದರ್ಶಿ ಸತೀಶ್ಚಂದ್ರ ಶೆಟ್ಟಿ, ಕೋಶಾಧಿಕಾರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು.