

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಟೆಂಪೊ ಡಿಕ್ಕಿಯಾಗಿ ಪಾದಾಚರಿಗಳಾದ ತಾಯಿ ಮತ್ತು ಮಗ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರನ್ನು ಹಳೆಯಂಗಡಿ ನಿವಾಸಿಗಳಾದ ಸುಕಲತಾ ಮತ್ತು ಚಿರಾಗ್ ಎಂದು ಗುರುತಿಸಲಾಗಿದೆ.ಟೆಂಪೊ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು, ಹಳೆಯಂಗಡಿ ಸಮೀಪಿಸುತ್ತಿದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಬಳಿಕ ಹೆದ್ದಾರಿಯ ಡಿವೈಡರ್ ಮೇಲೇರಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.ಅಪಘಾತದಿಂದ ಚಾಲಕ ಪವಾಡಸದೃಶ ಪಾರಾಗಿದ್ದಾನೆ. ಗಂಭೀರ ಗಾಯಗೊಂಡ ತಾಯಿ ಮತ್ತು ಮಗನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಪಘಾತಕ್ಕೆ ಟೆಂಪೊ ಚಾಲಕ ನ ನಿರ್ಲಕ್ಷ್ಯ ದ ಚಾಲನೆಯೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.