Header Ads
Breaking News

ಟೆಲಿಫೋನ್ ಕೇಬಲ್ ಗುಂಡಿ ತೆಗೆದ ಖಾಸಗಿ ಕಂಪೆನಿ : ಅಪಘಾತಗಳು ತಪ್ಪದ ದಿನವಿಲ್ಲ, ಸ್ಥಳೀಯರ ಆಕ್ರೋಶ

ಮಂಜೇಶ್ವರ: ಒಂದೆಡೆ ರಸ್ತೆ ಕಾಮಗಾರಿ ಪ್ರಯುಕ್ತ ನೀರಿನ ಪೈಪುಗಳು ನಿಷ್ಕ್ರಿಯವಾಗಿದ್ದರೆ ಇನ್ನೊಂದೆಡೆ ಕೇಬಲ್‍ಗಾಗಿ ರಸ್ತೆಯೇ ದುರಸ್ತಿಯಾಗುತ್ತಿದೆ. ಮಂಜೇಶ್ವರ ಗ್ರಾಮ ಪಂ. ವ್ಯಾಪ್ತಿಯ 6,7,8 ವಾರ್ಡುಗಳ ವ್ಯಾಪ್ತಿಯಲ್ಲಿ ಕೇಬಲ್‍ಗಾಗಿ ಗುಂಡಿ ತೋಡಿ ಕಿ.ಮೀ.ಗಟ್ಟಲೆ ರಸ್ತೆಯನ್ನು ಹಾಳುಗೆಡವಲಾಗಿದೆ. ಇಂತಹ ಕೆಲಸಕ್ಕೆ ಗ್ರಾಮ ಪಂಚಾಯತ್ ಅನುಮತಿಯನ್ನು ನೀಡಿರುವುದು ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಜೇಶ್ವರ ಕುನ್ನಿಲ್ ಕೆ ಜೆ ಎಂ ರಸ್ತೆ, ಚೌಕಿ, ಸಿರಾಜುಲ್ ರಸ್ತೆ, ಗುಡ್ದೆ ಶಾಲೆ ರಸ್ತೆ, ಸಮೀಪ ರಸ್ತೆ ಬದಿ ಖಾಸಗಿ ದೂರವಾಣಿ ಕಂಪನಿಯ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಸಂದರ್ಭ ರಸ್ತೆಗೆ ಹಾನಿ ಮಾಡಿದ್ದಾರೆ. ಅಸಲಿಗೆ ಇವರು ಮಂಜೇಶ್ವರ ಗ್ರಾಮ ಪಂಚಾಯತ್‍ನಿಂದ ಅನುಮತಿ ಪಡೆದು ಕೇಬಲ್ ಗುಂಡಿ ತೆಗೆದಿದ್ದರೂ, ಪಂಚಾಯತ್ ಹೇಳಿದ ನಿಯಮಗಳನ್ನು ಪಾಲಿಸಿಲ್ಲವೆಂಬ ಆರೋಪವಿದೆ. ರಸ್ತೆಯಿಂದ ದೂರದಲ್ಲಿ ಮಣ್ಣು ಅಗೆಯುವ ಬದಲು ರಸ್ತೆಯನ್ನೇ ಅಗೆದು ಹಾಳು ಮಾಡಿದ್ದಾರೆ. ಮೊದಲೇ ಇಕ್ಕಟ್ಟಿನ ಕಾಡು ಹಾದಿಯಲ್ಲಿ ತೆಗೆದ ಗುಂಡಿಯಿಂದಾಗಿ ಅದೆಷ್ಟೋ ಬೈಕ್ ಸವಾರರು, ವಾಹನ ಸವಾರರು ಗುಂಡಿಗೆ ಬಿದ್ದ ಘಟನೆಗಳೂ ನಡೆದಿದೆ.

ಹಲವು ಗುಂಡಿಗಳು ಹಾಗೇ ಉಳಿದು ಕೊಂಡಿವೆ. ಇದರ ಸಮೀಪವೇ ಖಾಸಗಿ ವ್ಯಕ್ತಿಯೊಬ್ಬರು ಅನುಮತಿ ನೀಡದ ಹಿನ್ನೆಲೆಯಲ್ಲಿ ಕೇಬಲ್ ಕಾಮಗಾರಿ ಅರ್ಧದಲ್ಲಿ ಮೊಟಕುಗೊಂಡಿದೆ. ಈ ಹಿನ್ನೆಲೆಯಲ್ಲಿ ಗುಂಡಿ ತೋಡಿ ಇಟ್ಟವರು ಗುಂಡಿಯನ್ನು ಮುಚ್ಚದೇ ಹೋಗಿರುವುದು ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ನೂರಾರು ವಿದ್ಯಾರ್ಥಿಗಳು ಪ್ರತಿದಿನ ಆಶ್ರಯಿಸುತ್ತಿರುವ ಈ ರಸ್ತೆಯಲ್ಲಿ ಗುಂಡಿಗಳನ್ನು ಹಾಗೇ ಬಿಟ್ಟಿರುವುದು ಅಪಾಯಕಾರಿ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಕೋರಲಾಗಿದೆ.

Related posts

Leave a Reply

Your email address will not be published. Required fields are marked *