Header Ads
Header Ads
Breaking News

ಟೋಲ್ ಮಹಿಳಾ ಸಿಬ್ಬಂದಿ ಜೊತೆಗೆ ಕಾರು ಚಾಲಕರು ಅನುಚಿತವಾಗಿ ವರ್ತನೆ

ಉಳ್ಳಾಲ: ಟೋಲ್ ಸಂಗ್ರಹ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಕಾರು ಚಾಲಕರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದನ್ನು ಇತರೆ ಸಿಬ್ಬಂದಿ ಪ್ರಶ್ನಿಸಿದಾಗ ನಡೆಯುವ ಗಲಾಟೆಗೆ ಬಣ್ಣ ಹಚ್ಚುವ ಮೂಲಕ ಮಾಸಿಕ ವೇತನಕ್ಕೆ ದುಡಿಯುವ ಸಿಬ್ಬಂದಿಯನ್ನೇ ಗೂಂಡಾಗಳೆಂದು ಕರೆಯಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿಯೇ ಆಗಿರುವ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಅಕ್ಷತಾ ಆರೋಪಿಸಿದರು.ತಲಪಾಡಿ ಗ್ರಾಮ ಪಂಚಾಯಿತಿನ 2018-19ರ ಸಾಲಿನ ಪ್ರಥಮ ಹಂತದ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಸ್ತೆ ಸರಿಯಿಲ್ಲದೇ ಟೋಲ್ ಪಡೆಯುವುದು ತಪ್ಪು ಎಂದು ಗೊತ್ತಿದೆ.

ಸಂಬಂಧಪಟ್ಟ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯವರೊಡನೆ ಹೋರಾಟ ನಡೆಸುವವರು ಮಾತನಾಡಬೇಕಿದೆ. ಆದರೆ ತಿಂಗಳ ವೇತನಕ್ಕೆ ದುಡಿಯುವ ಸಿಬ್ಬಂದಿ ಮೇಲೆ ಹೋರಾಟ ನಡೆಸುವವರು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಕರ್ತವ್ಯ ನಿರ್ವಹಣೆ ಸಂದರ್ಭ ಕೇರಳ ಭಾಗದಿಂದ ಬರುವ ಮತ್ತು ಹೋಗುವ ಕಾರುಗಳಲ್ಲಿರುವ ಯುವಕರು ಹಣ ಪಡೆದುಕೊಳ್ಳುವಾಗ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿದರೆ ಗಲಾಟೆಯನ್ನೇ ನಡೆಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದಾಗಿ ಇತ್ತೀಚೆಗೆ ಗ್ರಾಮದ ವ್ಯಕ್ತಿಯೋರ್ವರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಇದನ್ನು ಪಂಚಾಯಿತಿ ಗಂಭೀರವಾಗಿ ಪರಿಗಣಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಮಾಡಬೇಕಿತ್ತು.

ರಸ್ತೆಯಿಡೀ ಅವ್ಯವಸ್ಥೆಯಿಂದ ಕೂಡಿದ್ದರೂ ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕ ವಸೂಲಿ ಮಾಡುತ್ತಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯ. ಈ ಬಗ್ಗೆ ಹಲವು ಗ್ರಾಮಸಭೆಗಳಲ್ಲಿ ಗ್ರಾಮದಲ್ಲೇ ಇರುವ ಸುಂಕ ವಸೂಲಾತಿ ಕೇಂದ್ರದ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಾಗಿದೆ ಆದರೆ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು.ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಶ್ಯಾಮಲಾ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ , ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಖ್ ಕೊಳಂಗೆರೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply