Header Ads
Breaking News

ಡಾ.ಮಧುಕರ್ ಶೆಟ್ಟಿ ಸಾವು ಪ್ರಕರಣ ನ್ಯಾಯಾಂಗ ತನಿಖೆಗೆ: ಈ ಬೆಳವಣಿಗೆಗೆ ಕಾರಣವೇನು?

ದಕ್ಷ, ಪ್ರಾಮಾಣಿಕ, ಹಿರಿಯ ಐಪಿಎಸ್ ಅಧಿಕಾರಿಯಾಗಿ ಹೆಸರು ಗಳಿಸಿದ್ದ ಡಾ.ಮಧುಕರ್ ಶೆಟ್ಟಿಯವರ ಸಾವಿನ ಬಗ್ಗೆ ವ್ಯಕ್ತವಾಗಿದ್ದ ಅನುಮಾನಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡಲು ಆರು ತಜ್ಞ ವೈದ್ಯರನ್ನು ಒಳಗೊಂಡ ವಿಚಾರಣಾ ಸಮಿತಿಯೊಂದನ್ನು ಸರಕಾರ ನೇಮಿಸಿದೆ.

ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಮಧುಕರ್ ಶೆಟ್ಟಿ ಅನಾರೋಗ್ಯದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.25ರಂದು ಕೊನೆಯುಸಿರೆಳೆದಿದ್ದರು.

47ರ ಹರೆಯದ ಮಧುಕರ್ ಶೆಟ್ಟಿ ಇಪತ್ತು ವರ್ಷಗಳ ಸೇವಾ ಅವಧಿಯಲ್ಲಿ ಜನಸ್ನೇಹಿ, ದಕ್ಷತೆ ಹಾಗೂ ಪ್ರಾಮಾಣಿಕ ಆಧಿಕಾರಿ ಎಂಬ ಹೆಗ್ಗುರುತು ಹೊಂದಿದ್ದರು. ಅವರ ಅಕಾಲಿಕ ಸಾವಿಗೆ ಪೊಲೀಸ್ ಇಲಾಖೆ ಮಾತ್ರವಲ್ಲ, ರಾಜ್ಯವೇ ದಿಗ್ಭ್ರಮೆಗೊಂಡಿತ್ತು. ಮಧುಕರ್ ಅವರನ್ನು ಹತ್ತಿರದಿಂದ ಬಲ್ಲವರು, ಅವರ ಜತೆ ಕಾರ್ಯನಿರ್ವಹಿಸಿದವರು, ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಸಂದರ್ಭ ರಾಜ್ಯ ಗೃಹಸಚಿವ ಎಂ.ಬಿ.ಪಾಟೀಲ್ ಕೂಡಾ ಸಂಶಯವಿದ್ದರೆ ತನಿಖೆಗೆ ಆದೇಶ ನೀಡುವುದಾಗಿ ಹೇಳಿದ್ದರು.

ಮಧುಕರ್ ಶೆಟ್ಟಿ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ಮಧುಕರ್ ಶೆಟ್ಟಿಯವರಿಗೆ ನೀಡಲಾದ ಚಿಕಿತ್ಸೆ ಹಾಗೂ ಸಾವಿನ ಬಗ್ಗೆ ತನಿಖೆಗಾಗಿ ತಜ್ಞ ವೈದ್ಯರನ್ನೊಳಗೊಂಡ ಆರು ಮಂದಿಯ ವಿಚಾರಣಾ ಸಮಿತಿ ರಚಿಸಿದೆ.

ಮಧುಕರ್ ಶೆಟ್ಟಿ ಸಾವಿನ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ತಜ್ಞ ವೈದ್ಯರ ವಿಚಾರಣಾ ಸಮಿತಿ, ಅವರು ದಾಖಲಾಗಿದ್ದ ಕಾಂಟಿನೆಂಟಲ್ ಆಸ್ಪತ್ರೆಯ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಮಧ್ಯೆ ಸಮಿತಿ ಸದಸ್ಯರು ಸಭೆಯೊಂದನ್ನು ನಡೆಸಿದ್ದಾರೆ.

ವಿಚಾರಣಾ ಸಮಿತಿಯಲ್ಲಿ ಎಲ್ಲ ವಿಭಾಗಗಳ ತಜ್ಞರುಗಳಿದ್ದಾರೆ. ಸೂಕ್ತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *