Header Ads
Breaking News

ಡಿಸಿಸಿ ಬ್ಯಾಂಕ್ ಚುನಾವಣೆ ಬಿಜೆಪಿ ಪತನಕ್ಕೆ ನಾಂದಿ : ಜಯಪ್ರಕಾಶ್ ರೈ 

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಸಂಪೂರ್ಣ ಪರಾಭವಗೊಂಡಿರುವುದು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪತನದ ನಾಂದಿ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಸುಳ್ಯದಲ್ಲಿ ಸಹಕಾರ ಭಾರತಿ ಪ್ರತಿನಿಧಿಗಳಿಂದ ೭ ಮತಗಳ ಅಡ್ಡಮತವಾಗಿದೆ. ಇಲ್ಲಿ ಮತದಾರರು ಸಾಮಾನ್ಯ ಕಾರ್ಯಕರ್ತರಲ್ಲ. ಜನರಿಂದ ಆಯ್ಕೆಯಾದವರು. ಸಹಕಾರ ಭಾರತಿಯವರಿಗೆ ನಾವು ಹೇಳಿದಂತೆ ಎಲ್ಲರೂ ಕೇಳುವವರು ಎಂಬ ಭಾವನೆ ಇತ್ತು. ಬಿಜೆಪಿ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ವಿಚಾರ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಮಾಡಿದಂತಾಗಿದೆ. ನಾಯಕರಿಗೆ ಉಸಿರು ಕಟ್ಟುವ ವಾತಾವರಣ ಇದ್ದಂತಿದೆ. ಇದು ಚುನಾವಣೆಯಲ್ಲಿ ಆ ಪಕ್ಷದ ವಿರುದ್ಧ ಕೆಲಸ ಮಾಡುತ್ತದೆ ಎಂದು ಹೇಳಿದರು.

ನಳಿನ್‌ಕುಮಾರ್ ಕಟೀಲ್ ಅವರು ವಿಫಲ ಸಂಸದ ಎಂದು ಅವರದೇ ಪಕ್ಷದವರು ಹೇಳುತ್ತಿದ್ದಾರೆ. ಸಂಘ ಪರಿವಾರದ ನಾಯಕರೊಬ್ಬರೇ ಮೊನ್ನೆ ಅಂತಹ ಹೇಳಿಕೆ ನೀಡಿದ್ದಾರೆ. ಇಂತಹವರನ್ನು ಮತ್ತೆ ಕಣಕ್ಕಿಳಿಸಿ ಬಿಜೆಪಿ ನಷ್ಟ ಮಾಡಿಕೊಳ್ಳುತ್ತದೆ ಎಂದ ಅವರು, ಕಳೆದ ಬಾರಿ ಭಾವನಾತ್ಮಕ ವಿಚಾರಗಳನ್ನು ಉಲ್ಲೇಖಿಸಿ ಅವರನ್ನು ಗೆಲ್ಲಿಸಲಾಗಿತ್ತು. ಹಾಗೆ ಗೆಲ್ಲಿಸಿದವರು ಈಗ ಅವರ ವಿಫಲತೆಯ ಬಗ್ಗೆ ಮಾತನಾಡುತ್ತಾರೆ. ಇದನ್ನು ಮತದಾರರು ಅರ್ಥ ಮಾಡಿಕೊಂಡು ಈ ಬಾರಿ ಸೂಕ್ತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ಕಾಂಗ್ರೆಸ್ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿತು. ಅರ್ಹರಿಗೆ ಭೂಮಿ ಹಾಗೂ ಮನೆ ನೀಡಿತು. ಬಡವರ ಸಾಲ ಮನ್ನಾ ಮಾಡಿತು. ಈಗಿನ ಸರಕಾರ ಕೂಡಾ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರ ಸರಕಾರ ರೈತರಿಗೆ 6000 ನೀಡಿದ್ದನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದ ಅವರು, ರಾಷ್ಟ್ರದ ಗಡಿ ಮತ್ತು ಸೈನ್ಯದ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಉಗ್ರರ ದಮನಕ್ಕಾಗಿ ಕಾರ್ಯಾಚರಣೆ ಮಾಡಿದೆ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಆದರೆ ಬಿಜೆಪಿ ಸರಕಾರ ಅವಧಿಯಲ್ಲಿ ಆದ ೨ ಕಾರ್ಯಾಚರಣೆಗಳನ್ನು ತಮ್ಮ ವಿಜಯೋತ್ಸವ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ, ಈ ಅವಧಿಯಲ್ಲಿ ಅನೇಕ ಯೋಧರು ಜೀವ ಕಳೆದುಕೊಂಡಿರುವುದು ಅವರ ವಿಫಲತೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಾದ ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫಾ, ಕೆ.ಗೋಕುಲ್‌ದಾಸ್, ಸುಧೀರ್ ರೈ ಮೇನಾಲ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ದಿನೇಶ್ ಅಂಬೆಕಲ್ಲು, ನಂದರಾಜ್ ಸಂಕೇಶ, ಆರ್.ಕೆ.ಮಹಮ್ಮದ್, ಧೀರಾ ಕ್ರಾಸ್ತಾ, ಲಕ್ಷ್ಮಣ ಶೆಣೈ, ಶಹೀದ್ ಪಾರೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply

Your email address will not be published. Required fields are marked *