Header Ads
Breaking News

ತಲಪಾಡಿ ಟೋಲ್‌ಗೇಟ್ ಅವಾಂತರ : ಸಂಕಷ್ಟದಲ್ಲಿ ಗಡಿ ಪ್ರದೇಶದ ಪ್ರಯಾಣಿಕರು

ಮಂಜೇಶ್ವರ: ಗಡಿ ಪ್ರದೇಶದ ಜನತೆಗೆ ಶಾಪವಾಗಿರುವ ತಲಪಾಡಿ ಟೋಲ್ ಗೇಟಿನ ಅವಾಂತರದಿಂದ ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ದಿನನಿತ್ಯ ಪ್ರಯಾಣಿಕರು ಸಂಕಷ್ಟಕ್ಕೀಡಾಗುತಿದ್ದಾರೆ. ಈ ಬಗ್ಗೆ ಮುತುವರ್ಜಿ ವಹಿಸಿ ಸಮಸ್ಯೆಗಳನ್ನು ಪರಿಹರಿಸಬೇಕಾದ ಜನಪ್ರತಿನಿಧಿಗಳು ಕಂಡು ಕಾಣದಂತಹ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಫಾಸ್ಟ್‌ಟ್ಯಾಗ್ ಪ್ರಾಬಲ್ಯಕ್ಕೆ ಬಂದ ಬಳಿಕ ಮಂಗಳೂರು ಭಾಗದಿಂದ ತಲಪಾಡಿ ತನಕ ಆಗಮಿಸುತ್ತಿರುವ ಖಾಸಗಿ ಸಿಟಿ ಬಸ್ಸುಗಳು ಟೋಲ್‌ಗೇಟಿನಲ್ಲೇ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ತಿರುಗಿ ಹೋಗುತ್ತಿರುವುದನ್ನು ರೂಢಿಯಾಗಿಸಿದೆ. ಇದು ಕಾಸರಗೋಡು ಭಾಗಕ್ಕೆ ಬರುವ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವಂತಹ ಕ್ರಮವಾಗಿ ಪರಿಣಮಿಸಿದೆ. ಆದರೆ ಕಾಸರಗೋಡು ಭಾಗದಿಂದ ಆಗಮಿಸುವ ಖಾಸಗಿ ಬಸ್ಸುಗಳು ಕರ್ನಾಟಕದ ಸಿಟಿ ಬಸ್ಸುಗಳು ಮೊದಲು ನಿಲುಗಡೆಯಾಗುತಿದ್ದ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸಿ ಬರುತ್ತಿದೆ. ಇಲ್ಲಿಂದ ಕರ್ನಾಟಕದ ಬಸ್ಸಿನ ಕಡೆಗೆ ಸಾಗಬೇಕಾದರೆ ಸ್ವಲ್ಪ ನಡಿಯಲೇ ಬೇಕಾಗಿದೆ. ಇದು ಗರ್ಭಿಣಿ ಸ್ತ್ರೀಯರಿಗೆ, ವ್ರದ್ದರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಕೇರಳದ ತಲಪಾಡಿಯಲ್ಲಿರುವ ಮೊದಲಿನ ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿದೆ.

ಫೆಬವರಿ1 ರಿಂದ ಕರ್ನಾಟಕದ ಸಿಟಿ ಬಸ್ಸುಗಳು ಕೇರಳ ಬಸ್ಸು ನಿಲ್ದಾಣದ ತನಕ ಪ್ರಯಾಣಿಕರನ್ನು ತಲುಪಿಸದೇ ಇದ್ದರೆ ಕಾಸರಗೋಡು ಭಾಗದಿಂದ ಅಗಮಿಸುವ ಬಸ್ಸನ್ನು ಕರ್ನಾಟಕ ಭಾಗಕ್ಕೆ ಸಂಚರಿಸಲು ಬಿಡದ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಸ್ಥಳೀಯರು ಎಚ್ಚರಿಸಿದ್ದಾರೆ. ಈ ಬಗ್ಗೆ ಈಗಾಗಲೇ ವ್ಯಾಪಾರಿಯೊಬ್ಬರು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ, ಶಾಸಕರು, ಸಂಸದರು ಹಾಗೂ ಇತರ ಉನ್ನತಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದಾರೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಜನಪ್ರತಿಧಿಗಳು ಚರ್ಚಿಸಿ ಇದಕ್ಕೊಂದು ಪರಿಹಾರವನ್ನು ಕಾಣಬೇಕಾದದ್ದು ಅನಿವಾರ್ಯವಾಗಿದೆ.

ಟೋಲ್ ಗೇಟಿನಲ್ಲೂ ಒಂದೇ ಸಾಲಿನಲ್ಲಿ ಸಾಗುವ ವಾಹನಗಳಲ್ಲಿ ದಟ್ಟನೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕಮ್ಮಿಯಲ್ಲಿ ಮೂರು ಸಾಲುಗಳನ್ನಾದರೂ ಅನುಮತಿಸುವಂತೆ ಕೋರಲಾಗಿದೆ. ದಟ್ಟನೆ ಅಧಿಕಾಗುತ್ತಿರುವ ಹಿನ್ನೆಲೆಯಲ್ಲಿ ದಿನಂಪ್ರತಿ ಇಲ್ಲಿ ಪ್ರಯಾಣಿಕರ ಹಾಗೂ ಸಿಬ್ಬಂದಿಗಳ ಮಧ್ಯೆ ಗಲಾಟೆ ಮಾಮೂಲಿಯಾಗಿದೆ.

Related posts

Leave a Reply

Your email address will not be published. Required fields are marked *