Header Ads
Breaking News

ತಲಪಾಡಿ ಟೋಲ್ ಬಹಿಷ್ಕರಿಸಿ ಸ್ಥಳೀಯರ ಪ್ರತಿಭಟನೆ

ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರ ಮೇಲೆ ನಡೆದುಕೊಳ್ಳುವ ರೀತಿ ಅತಿರೇಕವಾಗುತ್ತಿದ್ದು ಅವರು ಗೂಂಡಾಗಿರಿ ನಿಲ್ಲಿಸದಿದ್ದರೆ ಗೆರಿಲ್ಲಾ ಯುದ್ಧದ ಶೈಲಿಯಲ್ಲಿ ಬಡಿದು ಬುದ್ಧಿ ಕಲಿಸಬೇಕಾದೀತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಎಚ್ಚರಿಸಿದರು.
ಫಾಸ್ಟ್ ಟ್ಯಾಗ್ ಕಡ್ಡಾಯ, ಫಾಸ್ಟ್ಯಾಗ್ ರಹಿತ ಸಂಚಾರಿಗಳಿಗೆ ದುಪ್ಪಟ್ಟು ದರ ವಸೂಲಿ, ಸ್ಥಳೀಯರಿಗೆ ಟೋಲ್ ಫ್ರೀ ಸಂಚಾರ ರದ್ದು ಹಾಗೂ ತಲಪಾಡಿ ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್‍ಗಳು ಮೇಲಿನ ತಲಪಾಡಿ ತನಕ ಸಂಚರಿಸಬೇಕು ಅಥವಾ ಸರಕಾರಿ ಬಸ್ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಡಿನಾಡ ರಕ್ಷಣಾ ವೇದಿಕೆ ಹಾಗೂ ತಲಪಾಡಿಯ ಸ್ಥಳೀಯರು ರಾಜಕೀಯ ರಹಿತವಾಗಿ ಗುರುವಾರ ತಲಪಾಡಿ ಟೋಲ್ ಪ್ಲಾಝಾ ಎದುರು ನಡೆಸಿದ ಪ್ರತಿಭಟನೆ ಸಭೆಯಲ್ಲಿ ಅವರು ಟೋಲ್ ಸಿಬ್ಬಂದಿ ವಿರುದ್ಧ ಹರಿತವಾದ ಮಾತಿನಲ್ಲಿಯೇ ಎಚ್ಚರಿಕೆ ಕೊಟ್ಟಿದ್ದಾರೆ.
ಈ ನಡುವೆ ಟೋಲ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ನಡೆಯುತ್ತಿದ್ದಾಗ ಒಬ್ಬ ಕಾರು ಸವಾರ ಫಾಸ್ಟ್ ಟ್ಯಾಗ್ ಹೊಂದಿರಲಿಲ್ಲ ಎಂಬ ಕಾರಣಕ್ಕೆ ದುಪ್ಪಟ್ಟು ದರ ವಿಧಿಸಿದ್ದನ್ನು ಪ್ರತಿಭಟನಾಕಾರರು ವಿರೋಧಿಸಿದರು. ಅದರ ಮಧ್ಯೆ ತಲಪಡಿಯ ಖಾಸಗಿ ಬಸ್ ಒಂದನ್ನು ಮೇಲಿನ ತಲಪಾಡಿಗೆ ಹೋಗುವಂತೆ ಟೋಲ್ ಗೇಟ್ ದಾಟಿಸಿದ್ದಾರೆ ಅದಕ್ಕೆ ಸಿಬ್ಬಂದಿ ಶಿವು ಎಂಬಾತ ಪ್ರತಿಭಟಿಸಿದ್ದು ಮಾತಿನ ಚಕಮಕಿ, ನೂಕುವಿಕೆ ನಡೆಯಿತು.
ಈ ವೇಳೆ ಗಡಿನಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ, ತಾಲೂಕು ಪಂಚಾಯಿತಿ ಸದಸ್ಯೆ ಸುರೇಖಾ ಚಂದ್ರಹಾಸ್ ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಕ್ ಕೊಳಂಗರೆ, ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯ ವೈಭವ್ ಶೆಟ್ಟಿ ತಲಪಾಡಿ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *