Header Ads
Header Ads
Header Ads
Breaking News

ತಲಪಾಡಿ ಶಾಲಾ ಮೈದಾನದಲ್ಲಿ 2 ನೇ ಸುತ್ತಿನ ಗ್ರಾಮಸಭೆ ತಲಪಾಡಿ ಟೋಲ್‌ಗೇಟೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಉಳ್ಳಾಲ: ತಲಪಾಡಿ ಟೋಲ್ ಗೇಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಲಪಾಡಿ ಗ್ರಾಮಸ್ಥರು, ಟೋಲ್ ಸಂಸ್ಥೆ ಅಧಿಕಾರಿಯನ್ನು ತರಾಟೆಗೆ ತೆಗೆದು ಸ್ಥಳೀಯ ವಾಹನಗಳಿಗೆ ಟೋಲ್ ಸುಂಕ ರಿಯಾಯಿತಿ ಇದೆ, ಈ ಬಗ್ಗೆ ಗುರುತು ಚೀಟಿ ತೋರಿಸಿದರೂ ಸಿಬ್ಬಂದಿ ನೂರೆಂಟು ದಾಖಲೆ ಕೇಳುವುದು, ವಿಚಿತ್ರ ರೀತಿಯಲ್ಲಿ ನೋಡುವುದು ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ ಘಟನೆ ತಲಪಾಡಿ ಗ್ರಾಮಸಭೆಯಲ್ಲಿ ನಡೆಯಿತು.

ತಲಪಾಡಿ ಶಾಲಾ ಮೈದಾನದಲ್ಲಿ ಜರಗಿದ 2018 ನೇ ಸಾಲಿನ ಎರಡನೇ ಸುತ್ತಿನ ತಲಪಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಿಗೆ ಟೋಲ್ ಸುಂಕದಲ್ಲಿ ರಿಯಾಯಿತಿ ನೀಡಬೇಕೆನ್ನುವು ನಿಯಮ ಹೆದ್ದಾರಿ ಪ್ರಾಧಿಕಾರ ಮಾಡಿಲ್ಲ, ಅಲ್ಲದೆ ನಿಮಗೆ ಉಚಿತವಾಗಿ ಬಿಡಬೇಕು ಎಂದೇನೂ ಇಲ್ಲ ಎಂದು ಶಿವಪ್ರಸಾದ್ ಹೇಳಿದ್ದು ಗ್ರಾಮಸ್ಥರನ್ನು ಕೆರಳಿಸಿತು. ನಮ್ಮ ಮನೆಗೇ ನಾವು ಸುಂಕ ಕಟ್ಟಬೇಕೇ, ನಾವೇನು ನಿಮ್ಮಲ್ಲಿ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಔದಾರ್ಯವೂ ನಮಗೆ ಬೇಡ. ಸುರತ್ಕಲ್‌ನಲ್ಲಿ ಕೆ.ಎ-19 ಇರುವ ಎಲ್ಲಾ ವಾಹನಗಳಿಗೆ ಟೋಲ್ ಸುಂಕ ರಿಯಾಯಿತಿ ಇದೆ. ಇಲ್ಲೂ ಹಾಗೇ ಮಾಡಬಹುದಿತ್ತು. ಆದರೆ ಕೇರಳದವರಿಗಾಗಿ ಐದು ಕಿ.ಮೀ. ಅಂತರದವರಿಗೆ ರಿಯಾಯಿತಿ ಕೇಳಿದ್ದೇವೆ. 90 ಶೇ. ಹೆದ್ದಾರಿ ಕಾಮಗಾರಿ ಮುಗಿದಿದೆ ಎನ್ನುವುದು ಸುಳ್ಳಲ್ಲವೇ ಎಂದು ಗ್ರಾಮಸ್ಥರು ಆಕ್ರೋಶದಿಂದಲೇ ಹೇಳಿದರು. ನಮಗೆ ಯಾರೂ ಔದಾರ್ಯ ತೋರಿಸಿಲ್ಲ, ನಮ್ಮ ಪ್ರಯತ್ನದಿಂದ ನಾವು ಉಚಿತವಾಗಿ ಹೋಗುತ್ತಿದ್ದೇವೆ ಎಂದು ಸುರೇಶ್ ಆಳ್ವ ಗ್ರಾಮಸ್ಥರ ವಾದವನ್ನು ಸಮರ್ಥಿಸಿದರು.
ಎಂಟು ವರ್ಷಗಳ ಹಿಂದಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತಲಪಾಡಿಯ ಹೆಸರಿಲ್ಲ ಎಂದು ಗ್ರಾಮಸ್ಥರು ಇಂಜಿನಿಯರ್ ವಿರುದ್ಧ ಸೆಟೆದು ನಿಂತರು. ಈ ವಿಚಾರದಲ್ಲಿ ಪಂಚಾಯಿತಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಯೋಜನೆ ಗ್ರಾಮಕ್ಕೆ ಬರಲೇಬೇಕು ಎಂದು ಅಧ್ಯಕ್ಷರೂ ಧ್ವನಿಗೂಡಿಸಿದರು.

ಹಿಂದಿನ ಗ್ರಾಮಸಭೆಯ ನಿರ್ಣಯ ಓದುವ ಸಂದರ್ಭ ಬಹುಗ್ರಾಮ ಕುಡಿಯುವ ನೀರಿನ ವಿಚಾರ ಪ್ರಸ್ತಾಪವಾಯಿತು. ಈ ಸಂದರ್ಭ ಅಬ್ಬಾಸ್ ಉಚ್ಚಿಲ್ ಹಾಗೂ ಸಂಶುದ್ದೀನ್ ಉಚ್ಚಿಲ್ ಅವರು ಯೋಜನೆ ಸೇರ್ಪಡೆ ಬಗ್ಗೆ ಮಾಹಿತಿ ಕೇಳಿದರು. ಗ್ರಾಮಸ್ಥರೂ ಧ್ವನಿಗೂಡಿಸಿದರು. ಈ ವಿಷಯ ಈಗಾಗಲೇ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ತಲುಪಿದೆ ಎಂದು ಪಿಡಿ‌ಓ ಕೇಶವ ಪೂಜಾರಿ ತಿಳಿಸಿದರು. ಇನ್ನಷ್ಟು ಮಾಹಿತಿಗೆ ಗ್ರಾಮಸ್ಥರು ಒತ್ತಾಯಿಸಿದಾಗ ಪಂಚಾಯಿತಿರಾಜ್ ಇಲಾಖೆಯ ಇಂಜಿನಿಯರ್ ನಿತಿನ್ ಪ್ರತಿಕ್ರಿಯಿಸಿ ಈಗಾಗಲೇ ಯೋಜನೆಯಲ್ಲಿ ತಲಪಾಡಿ, ಕೋಟೆಕಾರ್, ಕುರ್ನಾಡು, ಉಳ್ಳಾಲ ಸಹಿತ ಮಂಗಳೂರು ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಸೇರಿಸಲಾಗಿದ್ದು, 119 ಕೋಟಿಯ ಯೋಜನೆ ಇದಾಗಿದೆ. ಯೋಜನೆ ಬಗ್ಗೆ ಎಸ್‌ಎಸ್‌ಸಿಸಿ ಸಭೆಯಲ್ಲೂ ಚರ್ಚಿಸಲಾಗಿದೆ ಎಂದು ಹೇಳಿದರು. ಇಕ್ಕದೆ ಅಬ್ಬಾಸ್ ಉಚ್ಚಿಲ್ ಆಕ್ಷೇಪಿಸಿ, ತನ್ನ ಬಳಿ ದಾಖಲೆಗಳಿದ್ದು, ಸುಳ್ಳು ಮಾಹಿತಿ ನೀಡಬೇಡಿ. ನಿಮ್ಮಲ್ಲಿರುವ ದಾಖಲೆಗಳನ್ನು ನೀಡಿ ಎಂದರು. ಇತ್ತೀಚೆಗಷ್ಟೇ ಯೋಜನೆಯನ್ನು ಸೇರಿಸಲಾಗಿದ್ದು, ಬಂಟ್ವಾಳ ವಿಭಾಗದಲ್ಲಿ ದಾಖಲೆಗಳಿರುವುದರಿಂದ ತನ್ನಲ್ಲಿಲ್ಲ. 15 ದಿನದ ಹಿಂದೆ ಪ್ರಕ್ರಿಯೆ ನಡೆದಿದ್ದು, ಈಗಿನ ದಾಖಲೆಗಳಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.

ಶಿಶು ಅಭಿವೃದ್ಧಿ ಇಲಾಖೆಯ ಶ್ಯಾಮಲಾ ನೋಡೆಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಪಿಡಿ‌ಓ ಕೇಶವ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply