Header Ads
Header Ads
Breaking News

ತಲೆಗೊಂದು ಮುಟ್ಟಾಳೆ… ಸೊಂಟಕ್ಕೊಂದು ಬೈರಾಸು…: ಕೈಯಲ್ಲಿ ನೇಜಿ ಹಿಡಿದು ನಾಟಿ ಮಾಡಿದ ಮಕ್ಕಳು

ಬಂಟ್ವಾಳ: ತಲೆಗೊಂದು ಮುಟ್ಟಾಳೆ.. ಸೊಂಟಕ್ಕೊಂದು ಬೈರಾಸು.. ಕೈಯಲ್ಲಿ ನೇಜಿ ಹಿಡಿದು ನಾಟಿ ಮಾಡುತ್ತಿದ್ದರೆ ಮುಂದೆ ಈ ಮಕ್ಕಳೆಲ್ಲಾ ಅಪ್ಪಟ ಕೃಷಿಕರಾಗುವ ಲಕ್ಷಣ ಕಾಣುತ್ತಿತ್ತು. ಎಡೆಬಿಡದೆ ಧಾರಕಾರವಾಗಿ ಸುರಿಯುತಿದ್ದ ಮಳೆಯನ್ನು ಲೆಕ್ಕಿಸದೆ ಗದ್ದೆಯಲ್ಲಿ ಕೃಷಿ ನಡೆಸಿದ ರೀತಿ ದೊಡ್ಡವರನ್ನು ನಾಚಿಸುವಂತಿತ್ತು..


ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಇದರ ಆಶ್ರಯದಲ್ಲಿ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭತ್ತದ ನೇಜಿ ನಾಟಿ ಮಾಡಿ ಗಮನ ಸೆಳೆದರು.
ಶಾಲೆಯ ಆವರಣದಲ್ಲಿ ಕೈ ತೋಟ ನಿರ್ಮಿಸಿ ತರಕಾರಿ ಬೆಳೆದಿದ್ದ ದಡ್ಡಲಕಾಡು ಶಾಲೆಯ ಮಕ್ಕಳು ಗದ್ದೆಯಲ್ಲಿ ಭತ್ತದ ಕೃಷಿ ಮಾಡಬೇಕೆನ್ನುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಶಾಲಾ ದತ್ತು ಯೋಜನೆಯ ಸಂಘಟನೆಯಾದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಅಂಚನ್ ಅವರು ಕೇಲ್ದೋಡಿ ಕ್ಷೇತ್ರದ ಬಾಕಿಮಾರು ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಈ ಅವಕಾಶ ಕಲ್ಪಿಸಿದ್ದರು. ಶನಿವಾರ ಬೆಳಗ್ಗಿನಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ಗದ್ದೆಗೆ ಇಳಿದ ಮಕ್ಕಳು ಹಿರಿಯರ ಮಾರ್ಗದರ್ಶನ ಪಡೆದು ನೇಜಿ ನಾಟಿ ಮಾಡಿದರು. ರೈತಾಪಿ ಮಹಿಳೆಯರ ಓಬೇಲೆ ಹಾಡಿಗೆ ಧ್ವನಿಗೂಡಿಸಿ ಸಂಭ್ರಮಿಸಿದರು.
ಶಾಸಕರಿಂದ ಕೃಷಿ ಪಾಠ
ಸ್ವತಃ ಪ್ರಗತಿಪರ ಕೃಷಿಕರಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಯವರು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಭೋದಿಸಿದರು. ವಿದ್ಯಾರ್ಥಿಗಳು ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕವಾಗಿ ಗಟ್ಟಿಯಾಗುವುದರ ಜೊತೆಗೆ ಮಾನಸಿಕವಾಗಿ ಬೆಳೆಯಲು ಸಾಧ್ಯವಿದೆ ಎಂದರು. ಕೃಷಿಯಿಂದ ಮನಸ್ಸು ಉಲ್ಲಾಸವಾಗುತ್ತದೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾವು ಮಾಡುವ ಕೆಲಸದಲ್ಲಿ ಪ್ರೀತಿ, ಖುಷಿ ಇದ್ದರೆ ಉತ್ತಮ ಪ್ರತಿಫಲವನ್ನು ಪಡೆಯಲು ಸಾಧ್ಯವಿದೆ. ಅದು ನಮಗೆ ಒಳ್ಳೆಯ ಅನುಭವವನ್ನು ನೀಡುತ್ತದೆ ಎಂದರು. ತಲೆಗೆ ಮುಂಡಾಸು ಕಟ್ಟಿ ಅವರೂ ವಿದ್ಯಾರ್ಥಿಗಳೊಂದಿಗೆ ಸಂಭ್ರಮ ಪಟ್ಟರು.

ಈ ಸಂದರ್ಭ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ದಡ್ಡಲಕಾಡು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಕೇಲ್ದೊಡಿಗುತ್ತು ಕೋಟಿ ಪೂಜಾರಿ, ಕ್ಷೇತ್ರದ ಆಡಳಿತ ಸಮಿತಿ ಉಪಾಧ್ಯಕ್ಷ ಕರುಣೇಂದ್ರ ಪೂಜಾರಿ, ವಾಮದಪದವು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಯಶೋಧರ ಶೆಟ್ಟಿ ಮತ್ತಿತರರು ಹಾಜರಿದ್ದರು. ನೂರಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ಪಾಲ್ಗೊಂಡರು.
ವರದಿ: ಸಂದೀಪ್ ಸಾಲ್ಯಾನ್

Related posts

Leave a Reply