Header Ads
Breaking News

ತಲೆನೋವು ತಂದೊಡ್ಡುತ್ತಿದೆ ಜಪ್ಪು-ಮಹಾಕಾಳಿಪಡ್ಪು ರೈಲ್ವೇಗೇಟ್ ಸಮಸ್ಯೆ

ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಗೆ ಈಗಾಗಲೇ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳೂ ಘೋಷಣೆಯಾಗಿವೆ. ಆದರೆ ನಗರದೊಳಗೆ ಇರುವ ಸಮಸ್ಯೆಗಳು ಸ್ಮಾರ್ಟ್‌ಸಿಟಿ ಬಗ್ಗೆ ಅಣಕವಾಡುವಂತಿವೆ.ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಮಂಗಳೂರಿನ ಜಪ್ಪು ಮಹಾಕಾಳಿ ಪಡ್ಪುವಿನ ರೈಲ್ವೇಗೇಟ್. ಕಳೆದ ಹಲವಾರು ವರ್ಷಗಳಿಂದ ಇಲ್ಲೊಂದು ರೈಲ್ವೇ ಅಂಡರ್‌ಬ್ರಿಡ್ಜ್ ನಿರ್ಮಾಣಗೊಳ್ಳಬೇಕು ಎನ್ನುವ ಈ ಪ್ರದೇಶದ ಜನತೆಯ ಬೇಡಿಕೆಗೆ ಇನ್ನೂ ಉತ್ತರ ದೊರೆತಿಲ್ಲ. ಮಂಗಳೂರು. ದೇಶದಲ್ಲಿ ವಾಸಯೋಗ್ಯವಾದ ನಗರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ನಗರ. ಮಂಗಳೂರಿನ ಹಿರಿಮೆಗೊಂದು ಗರಿ ಎನ್ನುವಂತೆ ಮಂಗಳೂರು ನಗರವು ಈಗಾಗಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಆದರೆ ಮಂಗಳೂರು ನಗರದೊಳಗೆ ಜ್ವಲಂತವಾಗಿರುವ ಹಲವಾರು ಸಮಸ್ಯೆಗಳು ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ ಅಣಕವಾಡುವಂತಿದೆ. ಇಂತಹ ಸಮಸ್ಯೆಗಳ ಪೈಕಿ ಜಪ್ಪು ಮಹಾಕಾಳಿಪಡ್ಪುವಿನ ರೈಲ್ವೇಗೇಟ್ ಸಮಸ್ಯೆಯೂ ಒಂದು. ಕಳೆದ ಹತ್ತಾರು ವರ್ಷಗಳಿಂದ ಇಲ್ಲೊಂದು ರೈಲ್ವೇ ಅಂಡರ್‌ಪಾಸ್ ನಿರ್ಮಾಣಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಲೇ ಇದೆ. ಈ ನಿಟ್ಟಿನಲ್ಲಿ ಹಲವಾರು ಹೋರಾಟಗಳೂ ನಡೆದಿವೆ. ಆದರೆ ಇದ್ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೂಡ ದೊರಕಿಲ್ಲ. ಇದೀಗ ಈ ಪ್ರದೇಶದಲ್ಲಿ ರೈಲ್ವೇ ಹಳಿಯು ದ್ವಿಪಥವಾಗಲಿದೆ ಎನ್ನುವ ಮಾಹಿತಿ ಈ ಪ್ರದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಜೆಪ್ಪು ಮಹಾಕಾಳಿ ಪಡ್ಪು ಪ್ರದೇಶ ಮಂಗಳೂರು ನಗರ ಪ್ರವೇಶಕ್ಕೆ ಇರುವ ಶಾರ್ಟ್‌ಕಟ್. ಕೊಣಾಜೆ, ತೊಕ್ಕೊಟ್ಟು ಸಹಿತ ಕೇರಳ ಭಾಗದಿಂದ ಮಂಗಳೂರು ನಗರದತ್ತ ಆಗಮಿಸುವ ಬಹುತೇಕ ವಾಹನಗಳಿಗೆ ನಗರ ಪ್ರವೇಶಕ್ಕೆ ಇದುವೇ ಹೆಬ್ಬಾಗಿಲು. ಆದರೆ ಇಲ್ಲಿನ ರೈಲ್ವೇಗೇಟ್‌ನಿಂದಾಗಿ ನಿತ್ಯ ಹತ್ತಾರು ಗಂಟೆಗಳ ಕಾಲ ಟ್ರಾಫಿಕ್ ಜಾಂ ಸಂಭವಿಸುತ್ತಿದೆ. ನಿತ್ಯ ೪೦ಕ್ಕೂ ಅಧಿಕ ರೈಲುಗಳು ಸಂಚರಿಸುವ ಹಿನ್ನೆಲೆಯಲ್ಲಿ ಆಗಾಗ ರೈಲ್ವೇಗೇಟ್ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಹೀಗಾಗಿ ಇಲ್ಲೊಂದು ರೈಲ್ವೇ ಅಂಡರ್ ಪಾಸ್ ನಿರ್ಮಿಸಿ ಸಮಸ್ಯೆಗೆ ಪರಿಹಾರ ಒದಗಿಸಿಕೊಡುತ್ತೇವೆ ಎಂದು ಜನಪ್ರತಿನಿಧಿಗಳು ನೀಡಿದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ವಿನಃ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಮಲ ನಗರ ನಾಗರಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸ್ಥಳೀಯ ಜನರು ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಹೋರಾಟಗಾರರು ಹೇಳುವ ಪ್ರಕಾರ ಇದೀಗ ಇಲ್ಲಿ ಅಂಡರ್‌ಪಾಸ್ ನಿರ್ಮಾಣದ ಚೆಂಡು ಮಂಗಳೂರು ಮಹಾನಗರ ಪಾಲಿಕೆಯ ಅಂಗಳದಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆ10 ಕೋಟಿ ರೂ. ನೀಡಿದರೆ ಅಂಡರ್‌ಪಾಸ್ ನಿರ್ಮಿಸುವುದಾಗಿ ರೈಲ್ವೇ ಇಲಾಖೆ ಹೇಳಿದೆ ಎನ್ನಲಾಗಿದೆ. ಇದರ ಜೊತೆಗೆ ಇಲ್ಲಿ ಸಣ್ಣ ವಾಹನಗಳಿಗೆ ಪ್ರತ್ಯೇಕ ಅಂಡರ್‌ಪಾಸ್ ನಿರ್ಮಾಣಗೊಳ್ಳಬೇಕು ಎನ್ನುವ ಆಗ್ರಹವೂ ಕೇಳಿಬರುತ್ತಿದೆ. ಬೇಡಿಕೆ ಈಡೇರದಿದ್ದಲ್ಲಿ ರೈಲು ರೋಕೋ ಮುಂತಾದ ಉಗ್ರ ಪ್ರತಿಭಟನೆಯೂ ನಡೆಯಲಿದೆ ಎನ್ನುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಇನ್ನಾದರೂ ಜನರ ಸಮಸ್ಯೆಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Related posts

Leave a Reply