Header Ads
Breaking News

ತಲೆಯ ಮೇಲೊಂದು ಬೆಚ್ಚಗಿನ ಸೂರಿಲ್ಲ, ವಿದ್ಯುತ್ ಇಲ್ಲ: ಇದು ಉಡುಪಿ ಜಿಲ್ಲೆಯ ಮೂಲನಿವಾಸಿಗಳ ಬದುಕು

 ಎರಡು ಕುಟುಂಬಗಳಿಗೆ ಒಂದೇ ಶೌಚಾಲಯ, ವಿದ್ಯುತ್ ವ್ಯವಸ್ಥೆಯಂತೂ ದೂರದ ಮಾತು. ಅಂಗೈಯಗಲದ ಜೋಪಡಿಯಲ್ಲಿ ವಾಸ.. ಬಯಲೇ ಸ್ನಾನಗೃಹ!.. ಇದು ಉಡುಪಿ ಜಿಲ್ಲೆಯಲ್ಲಿ ವಾಸವಾಗಿರುವ ಮೂಲನಿವಾಸಿಗಳ ಬದುಕಿನ ಚಿತ್ರಣ.. ಮೂಲನಿವಾಸಿಗಳ ಜೀವನಮಟ್ಟ ಹೇಗಿದೆ ಎನ್ನುವುದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ. 

ಮೂಲ ನಿವಾಸಿಗಳ ಮೂಲಭೂತ ಸೌಲಭ್ಯಕ್ಕೆ ಸರ್ಕಾರ ವಿವಿಧ ಯೋಜನೆ, ಅನುದಾನ ಎಲ್ಲವನ್ನೂ ನೀಡುತ್ತಿದ್ದರೂ, ಅಧಿಕಾರಿಗಳ ಬದ್ದತೆ ಕೊರತೆಯಿಂದ ಮೂಲನಿವಾಸಿಗಳ ಬದುಕು ಇನ್ನೂ ಸುಧಾರಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಯಾವುದೇ ಹಿಂಜರಿಕೆ ಬೇಡ. ಬೈಂದೂರು ತಾಲೂಕು. ಜಡ್ಕಲ್ ಗ್ರಾಮ ಪಂಚಾಯಿತಿ ಸನಿಹದಲ್ಲೇ ಕೊರಗ ಕುಟುಂಬ ಬೆಚ್ಚಗಿನ ಸೂರಿಲ್ಲದೆ ಬದುಕುತ್ತಿದ್ದಾರೆ. ಕೊಲ್ಲೂರು ಕಮಲಶಿಲೆ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಮೂಲನಿವಾಸಿಗಳು ಅತ್ಯಂತ ಶೋಚನೀಯ ಬದುಕು ಸಾಗಿಸುವ ಮೂಲಕ ನಾಗರಿಕ ಪ್ರಪಂಚವೇ ತಲೆ ತಗ್ಗಿಸುವಂತೆ ಮಾಡಿದೆ. ಕಳೆದ ಮೂರು ದಶಕದ ಹಿಂದೆ ಜಡ್ಕಲ್ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಎರಡು ಕೊರಗ ಕುಟಂಬ ನೆಲೆ ನಿಂತಿತ್ತು. ಆರಂಭದಲ್ಲಿ ಜೋಪಡಿಯಲ್ಲಿ ವಾಸಮಾಡಿಕೊಂಡಿದ್ದು, ನಂತರ ಗ್ರಾಪಂ ಎರಡು ಮನೆ ಕಟ್ಟಿಕೊಟ್ಟಿದ್ದು, ಅದರಲ್ಲಿ ಕೊರಗರು ವಾಸವಾಗಿದ್ದರು. ಮನೆ ನಿರ್ವಹಣೆ ಕೊರತೆಯಿಂದ ಒಂದು ಮನೆ ನೆಲೆಕಚ್ಚಿದ್ದು, ಮತ್ತೊಂದು ಮನೆ ಭಾಗಶಃ ಹಾನಿಯಾಗಿದ್ದರಿಂದ ಅನಿವಾರ್ಯವಾಗಿ ಮನೆ ಬಿಟ್ಟು, ಜೋಪಡಿಯಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೊರಗ ಕುಟಂಬ ಇದೇ ಜೋಪಡಿಯಲ್ಲಿ ದಿನ ದೂಡುತ್ತಿದೆ.
ವಾಯ್ಸ್೨: ಜೋಪಡಿಗೆ ತೆಂಗಿನ ಗರಿ ಹೊದಿಸಿದ್ದು, ಅದರ ಮೇಲೆ ಪ್ಲಾಸ್ಟಿಕ್ ಹಾಕಲಾಗಿದೆ. ಮಳೆಗಾದಲ್ಲಿ ಹೊರಗೆ ಮಲಗಲು ಆಗದಿರುವುದರಿಂದ ಮಳೆಗಾಲಕ್ಕೆ ಹಟ್ಟಿಯಂತೆ ಶೆಡ್ ಕಟ್ಟಿಕೊಳ್ಳುತ್ತಿದ್ದಾರೆ. ಒಟ್ಟಾರೆ ವಿದ್ಯುತ್ ಇಲ್ಲದೆ, ಶೌಚಾಲಯ ಇಲ್ಲದೆ ದಿನ ಕಳೆಯುತ್ತಿರುವ ಕೊರಗರ ಸಹನೆಗೆ ಸೆಲ್ಯೂಟ್ ಹೊಡೆಯಲೇಬೇಕು. ಐಟಿಡಿಪಿ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದ್ದರೂ ಉಳ್ಳವರ ಮನೆ ಸಂಪರ್ಕಕ್ಕೆ ರಸ್ತೆ ಮಾಡುವ ಮೂಲಕ ಮೂಲ ನಿವಾಸಿಗಳ ಅಭಿವೃದ್ಧಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜಡ್ಕಲ್‌ನಲ್ಲಿ ಎರಡು ಕುಟುಂಬ ಕಳೆದ ನಾಲ್ಕು ವರ್ಷದಿಂದ ಜೋಪಡಿಯಲ್ಲಿ ವಾಸ ಮಾಡುತ್ತಿದ್ದರೂ, ಐಟಿಡಿಪಿ ಅಧಿಕಾರಿಗಳು ಕೊರಗರ ಕೊರಗೇನು ಎಂದು ಕೇಳದಿರುವುದು ಮೂಲನಿವಾಸಿಗಳ ಕಡೆಗಣಿಸುತ್ತಿದ್ದಾರೆ ಎನ್ನೋದಕ್ಕೊಂದು ಸಣ್ಣ ನಿದರ್ಶನ. ಐಟಿಡಿಪಿ ಇಲಾಖೆ ಹೀಗೆ ತಾತ್ಸಾರ ಮಾಡಿದರೆ, ಜೋಪಡಿ ಬದಲು ಚಿಕ್ಕದೊಂದು ಮನೆಕಟ್ಟಿಕೊಳ್ಳುವ ಆಸೆಗೂ ಅರಣ್ಯ ಇಲಾಖೆ ಅಡ್ಡಗಾಲಿಕ್ಕಿದೆ. ಮೂಲನಿವಾಸಿಗಳ ಕೂತ ಜಾಗದ ಹಕ್ಕು ಪತ್ರವಿದ್ದರೂ ಮರತೆಗೆದು ಸಮತಟ್ಟು ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಮರ ತೆರವು ಮಾಡುವಂತೆ ಗ್ರಾಪಂ ವರದಿ ನೀಡಿದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಸ್ವಲ್ಪ ಜಾಗ ಸಮತಟ್ಟು ಮಾಡಿದ್ದು, ಅಲ್ಲಿದ್ದ ಒಂದು ಮರ ಕಡಿದಿದ್ದಕ್ಕೆ ಕೇಸ್ ಹಾಕಲಾಗಿದೆ. ಅದೇ ಜಡ್ಕಲ್‌ನಲ್ಲಿ ರಸ್ತೆ ಮಾಡುವ ಹಿನ್ನೆಲೆಯಲ್ಲಿ ಕಾಡಿಗೆ ಕಾಡನ್ನೇ ರಾತ್ರೋರಾತ್ರಿ ಕಡಿದುರುಳಿಸಿದ್ದರು. ಮೂಲ ನಿವಾಸಿಗಳ ಮನೆಗೆ ಸಮಸ್ಯೆ ಆಗುವ ಮರಗಳ ತೆರವಿಗೆ ಏಕೆ ಒಪ್ಪಿತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಬಡವರಿಗೊಂದು, ಉಳ್ಳವರಿಗೊಂದು ನ್ಯಾಯ ಮಾಡುತ್ತದೆ ಎಂದು ಕಾಲನಿ ನಿವಾಸಿಗಳು ಅವಲತ್ತುಕೊಂಡಿದ್ದಾರೆ..


ಇನ್ನು ಕೊರಗ ಕುಟುಂಬದ ಅಕ್ಕು ಎಂಬವರ ಮಗಳು ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಶಿಕ್ಷಣದಿಂದಲೂ ವಂಚಿತಳಾಗಿದ್ದಾಳೆ. ಹುಟ್ಟಿ ಮೂರು ತಿಂಗಳಿಗೆ ಮೂತ್ರ ಸಮಸ್ಯೆ ತಲೆದೋರಿದ್ದು, ಮೂತ್ರದ ಮೇಲೆ ಬಾಲಕಿಗೆ ಹಿಡಿತವೇ ಇಲ್ಲಾ. ಬಾಲಕಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆ ಪರೀಕ್ಷೆಗೊಳಪಡಿಸಿದ್ದು ನರ ಸಮಸ್ಯೆಯಿಂದ ಹೀಗಾಗಿದೆ ಎನ್ನುವ ಉತ್ತರ ವೈದ್ಯರಿಂದ ಬಂದಿದೆ. ಹನ್ನೆರಡು ವರ್ಷದ ನಂತರ ಸರಿಯಾಗುತ್ತದೆ ಎಂದು ಒಂದಿಷ್ಟು ಮಾತ್ರೆ ಔಷಧಿ ಕೊಟ್ಟಿದ್ದು ಬಿಟ್ಟರೆ ಬಾಲಕಿಯ ಆರೋಗ್ಯ ಸುಧಾರಿಸಿಲ್ಲ. ವಾರಕ್ಕೆ ಪ್ಯಾಡ್ ಇನ್ನಿತರ ಔಷಧಿ ಎಂದು ೬೦೦ ರೂ. ಬೇಕಾಗುತ್ತದೆ. ಐಟಿಡಿಪಿ ಅನುದಾನದಲ್ಲಿ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅವಕಾಶವಿದ್ದರೂ ಗಮನ ಹರಿಸುತ್ತಿಲ್ಲ. ಶಾಲೆಗೆ ಹೋಗಬೇಕು ನಾಲ್ಕು ಅಕ್ಷರ ಕಲಿಯಬೇಕು ಎನ್ನುವ ಬಾಲಕಿಯ ಆಸೆ ಕಮರಿ ಹೋಗುತ್ತಿದ್ದು, ಶಿಕ್ಷಣದಿಂದಲೂ ವಂಚಿತಳಾಗುತ್ತಿದ್ದಾಳೆ. ಮೂಲನಿವಾಸಿಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದರೂ ಅಧಿಕಾರಿಗಳ ನಿರ್ಲಕ್ಷಕ್ಕೆ ಬಾಲಕಿ ಶಿಕ್ಷಣದಿಂದ ವಂಚಿತಳಾಗುತ್ತಿರುವುದು ನಾಗರಿಕ ಪ್ರಪಂಚವೇ ತಲೆ ತಗ್ಗಿಸುವಂತೆ ಮಾಡಿದೆ.

 ಹಿಂದಿನಿಂದಲೂ ಅತ್ಯಂತ ಶೋಷಣೆಗೊಳಪಟ್ಟವರು ಕೊರಗ ಜನಾಂಗದವರು. ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಇರುವ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಕಾರ್ಯ ವೈಕರ್ಯಗಳು ಸಾಲದೆ ಇರುವುದರಿಂದ ಕೊರಗರ ಅಭಿವೃದ್ಧಿ ಕುಂಠಿತವಾಗುತ್ತಿದೆ. ಜಡ್ಕಲ್ ಗ್ರಾಮ ಪಂಚಾಯಿತಿ ಅನತಿ ದೂರದಲ್ಲಿಯೇ ಶೋಚನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಕೊರಗ ಕುಟುಂಬಗಳ ಬದುಕು ಸ್ಥಳಿಯಾಡಳಿತಕ್ಕೆ ಕಾಣಿಸದೆ ಇರುವುದು ದುರದೃಷ್ಟಕರ. ವಿದ್ಯಾಭ್ಯಾಸ ಜೀವನದಿಂದ ವಂಚಿತಳಾಗಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹನ್ನೆರಡರ ಬಾಲೆಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಸಂಭಂದಿಸಿದ ಇಲಾಖೆ ಶೀಘ್ರ ಸ್ಪಂದಿಸಬೇಕಾಗಿದೆ. ಸರ್ಕಾರ ನೀಡುವ ಸಂವಿಧಾನ ಬದ್ದ ಹಕ್ಕುಗಳನ್ನು ಶೋಷಿತ ವರ್ಗಗಳಿಗೆ ತಲುಪಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯಕ್ತಿ ಕೊರತೆಯೇ ಇದಕ್ಕೆಲ್ಲಾ ಕಾರಣ. ಇನ್ನಾದರೂ ಸಂಬಂಧಪಟ್ಟ ಇಲಾಖೆ ವಾಟಿಗುಂಡಿ ಕೊರಗರ ನೆರವಿಗೆ ಬರಲಿ ಎನ್ನೋದೆ ನಮ್ಮ ಆಶಯ.

Related posts

Leave a Reply

Your email address will not be published. Required fields are marked *