Header Ads
Header Ads
Breaking News

ತಾಕತ್ತಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಿ, ಬಿಜೆಪಿ ರಾಜ್ಯ ನಾಯಕರಿಗೆ ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಸವಾಲು

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ರೂ. ೫೦ ಸಾವಿರ ಸಾಲ ಮನ್ನಾ ಮಾಡಿರುವುದು ರೈತರು ಸಂಭ್ರಮಾಚರಣೆ ನಡೆಸಬೇಕಾದ ವಿಚಾರವಾಗಿದೆ.
ತಾಕತ್ತಿದ್ದರೆ ಈ ಭಾಗದ ಬಹಳಷ್ಟು ಪ್ರಭಾವಶಾಲಿ ಬಿಜೆಪಿ ನಾಯಕರಾದ ಯಡಿಯೂರಪ್ಪ, ಸದಾನಂದ ಗೌಡ, ನಂತ್‌ಕುಮಾರ್, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಅವರು ಕೇಂದ್ರದ ಮೇಲೆ ಒತ್ತಡ ಹಾಕಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಸಾಲದ ರೂ. ೨೫ ಸಾವಿರ ಬಡ್ಡಿ ಮನ್ನಾ ಘೋಷಣೆ ಮಾಡಿ ತಮ್ಮ ಅಧಿಕಾರಾವಧಿಯಲ್ಲಿ ಅದನ್ನು ರೈತರಿಗೆ ನೀಡಲಾಗದ ಬಿಜೆಪಿ ನಾಯಕರಾದ ಯಡಿಯೂರಪ್ಪ ಅವರಿಗೆ ನಾವೇ ಹೇಳಿ, ಹೋರಾಟ ಮಾಡಿ ಸಾಲ ಮನ್ನಾ ಮಾಡಿಸಿದ್ದೇವೆ ಎಂದು ಹೇಳಲು ನಾಚಿಕೆಯಾಗಬೇಕು ಎಂದರು. ತಮ್ಮ ಅಧಿಕಾರಾವಧಿಯಲ್ಲಿ ರೈತರ ಕೊಲೆ ಮಾಡಿದವರು, ರೈತರ ಮೇಲೆ ಗೋಲಿಬಾರ್ ಮಾಡಿದವರು ಇದೀಗ ತಾವೇ ಹೋರಾಟ ಮಾಡಿ ಸಾಲ ಮನ್ನಾ ಮಾಡಿಸಿದ್ದೇವೆ ಎಂದರೆ ರೈತರು ಯಾರೂ ನಂಬಲಾರರು ಎಂದು ಅವರು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಅಲ್ಪಾವಧಿ ಸಾಲದಲ್ಲಿ ಚಿಕ್ಕಾಸು ಮನ್ನಾ ಮಾಡಿಸಲು ಸಾಧ್ಯವಾಗದ ಬಿಜೆಪಿಯ ವೆಂಕಯ್ಯ ನಾಯ್ಡು ಅವರು ಶೋಕಿಗಾಗಿ ಫ್ಯಾಶನ್‌ಗಾಗಿ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಎಷ್ಟಿದೆ ಎಂಬುವುದು ಇದರಿಂದ ತಿಳಿಯುತ್ತದೆ ಎಂದ ಅವರು ಯಡಿಯೂರಪ್ಪರಿಗೆ ಸಾಲ ಮನ್ನಾ ಮಾಡಿದ ರೂ. ೫೦ ಸಾವಿರ ಜುಜುಬಿ ಹಣ ಆಗಿರಬಹುದು, ಆದರೆ ಬಡ ರೈತರ ಪಾಳಿಗೆ ಅದು ದೊಡ್ಡ ಮೊತ್ತ ಆಗಿದೆ ಎಂದರು. ಜಗದೀಶ್ ಶೆಟ್ಟರ್ ಅವರು ಮುಖ್ಯ ಮಂತ್ರಿಯಾಗಿದ್ದ ವೇಳೆ ರೈತರ ಸಾಲದ ಬಡ್ಡಿ ಮನ್ನಾ ಘೋಷಣೆ ಮಾಡಲಾಗಿದೆಯೇ ಹೊರತು ಅದನ್ನು ರೈತರಿಗೆ ಮುಟ್ಟಿಸುವ ಕೆಲಸ ಮಾಡಿಲ್ಲ. ಅದನ್ನು ಮುಟ್ಟಿಸುವ ಕೆಲಸ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂಬುವುದು ಬಿಜೆಪಿಯವರಿಗೆ ತಿಳಿದಿರಬೇಕು.
ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲೋಕೇಶ್ ಹೆಗ್ಡೆ, ನಗರಸಭೆಯ ಸದಸ್ಯರಾದ ಅನ್ವರ್‌ಖಾಸಿಂ, ಸ್ವರ್ಣಲತಾ ಹೆಗ್ಡೆ, ನಗರ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಮತ್ತು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply