Header Ads
Header Ads
Breaking News

ತೆಕ್ಕಟ್ಟೆ ಮಾಲಾಡಿಯಲ್ಲಿ ‘ಆಪರೇಶನ್ ಚೀತಾ’ ಸಕ್ಸಸ್. ಕೊನೆಗೂ ಬೋನಿಗೆ ಬಿದ್ದ ಹೆಣ್ಣು ಚಿರತೆ!. ಕುಂದಾಪುರದ ತೆಕ್ಕಟೆ ಗ್ರಾ.ಪಂ.ನ ಮಾಲಾಡಿ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಚಿರತೆ ಸೆರೆ ಹಿಡಿಯಲು ಇಟ್ಟ ಬೋನಿಗೆ ಶುಕ್ರವಾರ ತಡರಾತ್ರಿ ಹೆಣ್ಣು ಚಿರತೆ ಬಿದ್ದಿದ್ದು ಅರಣ್ಯ ಇಲಾಖೆಯವರು ಶನಿವಾರ ಅದನ್ನು ವಶಕ್ಕೆ ಪಡೆದಿದ್ದಾರೆ.ಮಾಲಾಡಿಯ ತೋಟವೊಂದರಲ್ಲಿ ಕಳೆದೊಂದು ವಾರದ ಹಿಂದೆ ಚಿರತೆ ಪ್ರತ್ಯಕ್ಷವಾದ ಬೆನ್ನಲ್ಲೆ ಕಳೆದ ಗುರುವಾರ ಸಂಜೆ ಅರಣ್ಯ ಇಲಾಖೆಯು ಬೋನು ಇಟ್ಟು ಪಂಚಾಯತಿ ನೀಡಿದ ಆರೂವರೆ ಸಾವಿರ ಮೌಲ್ಯದ ಮೇಕೆಯನ್ನು ಬೋನಿನೊಳಗೆ ಕಟ್ಟಿದ್ದರು. ವಾರ ಕಳೆದರೂ ಚಿರತೆ ಮಾತ್ರ ಇತ್ತಕಡೆ ಸುಳಿದಿರಲಿಲ್ಲ. ಶುಕ್ರವಾರ ಸಂಜೆ ಮೇಕೆ ಬದಲಾಗಿ ನಾಯಿ ಮರಿಗಳನ್ನು ಬೋನಿನೊಳಕ್ಕೆ ಬಿಟ್ಟಿದ್ದು ಶನಿವಾರ ಬೆಳಿಗ್ಗೆ ನೋಡುವಾಗ ಚಿರತೆ ಬೋನಿನೊಳಕ್ಕೆ ಬಿದ್ದು ಬಂಧಿಯಾಗಿತ್ತು.ಕುಂದಾಪುರ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಉದಯ ಹಾಗೂ ಅರಣ್ಯ ರಕ್ಷಕ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ. ಅಂದಾಜು ಮೂರೂವರೆ ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದೆ.ಸೆರೆಯಾದ ಚಿರತೆಯನ್ನು ವಿದ್ಯಾರ್ಥಿಗಳು ನೋಡುವ ಉದ್ದೇಶದಿಂದ ಸ್ಥಳೀಯರ ಕೋರಿಕೆ ಮೇರೆಗೆ ತೆಕ್ಕಟ್ಟೆ ಕುವೆಂಪು ಸರಕಾರಿ ಮಾದರಿ ಶಾಲೆ, ತೆಕ್ಕಟ್ಟೆ ಸೇವಾಸಂಗಮ ವಿದ್ಯಾಕೇಂದ್ರ ಶಾಲೆಗೆ ಕೊಂಡೊಯ್ದು ಪ್ರದರ್ಶಿಸಲಾಯಿತು. ಚಿರತೆಯನ್ನು ಕಂಡವಿದ್ಯಾರ್ಥಿಗಳು ಕುತೂಹಲದ ಜೊತೆ ಸಂತಸವನ್ನು ಪಟ್ಟರು.ಚಿರತೆ ಕಾಣಿಸಿಕೊಂಡ ತೋಪಿನ ಪಕ್ಕದಲ್ಲೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ದೇವಸ್ಥಾನವಿದ್ದು ಇದು ಜನ ಸಂಚಾರದ ಸ್ಥಳವಾಗಿತ್ತು. ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಅರಣ್ಯಾಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಜನರ ಆತಂಕ ನಿವಾರಿಸಲು ಬೋನು ಇಟ್ಟಿದ್ದರು. ಇನ್ನೂ ಕೂಡ ಒಂದೆರಡು ಚಿರತೆ ಇರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು ಮತ್ತೆ ಬೋನಿಟ್ಟು ಕಾರ್ಯಾಚರಣೆ ಮುಂದುವರೆಯಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಸ್ಥಳಕ್ಕೆ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷ ಶೇಖರ್ ಕಾಂಚನ್, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸದಸ್ಯರಾದ ವಿಜಯ ಭಂಡಾರಿ, ಸಂಜೀವ ದೇವಾಡಿಗ, ಸತೀಶ್ ದೇವಾಡಿಗ,ಆಶಲತಾ ಶೆಟ್ಟಿ, ಸ್ಥಳಿಯರಾದ ಸತೀಶ್ ತೆಕ್ಕಟ್ಟೆ, ಸುರೇಂದ್ರ ತೆಕ್ಕಟ್ಟೆ,ರಮೇಶ್, ಸುರೇಶ್ ಶೆಟ್ಟಿ ಮಾಲಾಡಿ ಇದ್ದರು

Related posts

Leave a Reply