Breaking News

ತೆಲಂಗಾಣದಲ್ಲಿ ಕನಸು ನಂಬಿ ರಸ್ತೆ ಅಗೆದರು, ಮೂಢನಂಬಿಕೆಗೆ ಬಲಿಯಾಯ್ತು ಹೆದ್ದಾರಿ

ತೆಲಂಗಾಣದಲ್ಲಿ ಯುವಕನೊಬ್ಬನ ಕನಸನ್ನು ನಂಬಿ, ಜನ ಅಚ್ಚುಕಟ್ಟಾಗಿದ್ದ ಹೆದ್ದಾರಿಯನ್ನೇ ಅಗೆದಿದ್ದಾರೆ. ಹೆದ್ದಾರಿಯ ಮಧ್ಯೆ ೧೦ ಅಡಿ ಆಳದಲ್ಲಿ ಶಿವಲಿಂಗವಿದೆ ಎಂದು ಈತ ಕಳೆದ ೩ ವರ್ಷಗಳಿಂದ ಹೇಳುತ್ತಲೇ ಇದ್ದ. ಮೊದಲಿಗೆ ಜನರ ಬೆಂಬಲ ಸಿಗದೇ ಹೋದರೂ ಮತ್ತೆ ಮತ್ತೆ ಹೇಳ್ತಾನಲ್ಲ ಅಂತ ನೆಲ ಅಗೆದು ನೋಡಿದ್ದಾರೆ.
೧೦ ಅಡಿ ತೋಡಿದರೂ ಲಿಂಗ ಕಾಣದೇ ಹೋದಾಗ, ಇನ್ನೂ ೫ ಅಡಿ ಕೆಳಗೆ ತೋಡಿ ಎಂದಿದ್ದಾನೆ. ನೋಡಿಯೇ ಬಿಡೋಣ ಎಂದು ಮತ್ತೂ ೫ ಅಡಿ ನೆಲ ಅಗೆದರೂ ಶಿವಲಿಂಗ ಮಾತ್ರ ಪ್ರತ್ಯಕ್ಷವಾಗಲೇ ಇಲ್ಲ. ಕನಸಿನ ಪುರಾಣ ಭಾರತದ ಮಟ್ಟಿಗೆ ಹೊಸದೇನಲ್ಲ. ಹಿಂದೆ ಉತ್ತರ ಪ್ರದೇಶದ ಉನ್ನಾವ್ನಲ್ಲಿ ಸಂತರೊಬ್ಬರು ಭಾರೀ ನಿಧಿ ಇರುವ ಕನಸಿನ ಬಗ್ಗೆ ಹೇಳಿ ಸುಮ್ಮನೇ ನೆಲ ಅಗೆಸಿದ್ದರು. ಕಡೆಗೆ ಅಲ್ಲೂ ಏನೂ ಸಿಗದೆ ಉತ್ತರ ಪ್ರದೇಶ ಸರಕಾರವೇ ತೀವ್ರ ಮುಜುಗರಕ್ಕೆ ಈಡಾಗಿತ್ತು.
ಈ ಘಟನೆ ನಡೆದಿರುವುದು ಹೈದರಾಬಾದ್ನಿಂದ ೮೦ ಕಿ.ಮೀ. ದೂರದ ಜಾಂಗೋನ್ನಲ್ಲಿ. ಮನೋಜ್ ಎಂಬ ಯುವಕನಿಗೆ ಕಳೆದ ಮೂರು ವರ್ಷಗಳಿಂದಲೂ ಹೆದ್ದಾರಿಯ ಮಧ್ಯೆ ಶಿವಲಿಂಗ ಸಿಲುಕಿಕೊಂಡಿದೆ ಎಂಬ ಕನಸು ಬೀಳುತ್ತಲೇ ಇತ್ತಂತೆ. ಹಲವಾರು ಬಾರಿ ತನ್ನ ಗ್ರಾಮದ ಜನರ ಜತೆ ಚರ್ಚಿಸಿದ್ದಾನೆ. ರಸ್ತೆ ಅಗೆವ ಮಾತುಗಳನ್ನಾಡಿದ್ದಾನೆ. ಅಲ್ಲದೆ ಲಿಂಗವಿದೆ ಎಂದು ತೋರುತ್ತಿದ್ದ ಜಾಗಕ್ಕೆ ಹೋದೊಡನೆ, ಮೈಮೇಲೆ ದೇವರು ಬಂದವರ ಹಾಗೆ ಆಡೋದು, ರಸ್ತೆಯಲ್ಲೇ ಬಿದ್ದು ಹೊರಳಾಡೋದು, ಇಡೀ ದೇಹವನ್ನು ಕುಣಿಸುವ ಕೆಲಸ ಮಾಡುತ್ತಿದ್ದನಂತೆ. ಕಡೆಗೆ ಗ್ರಾಮದ ಒಬ್ಬ ಮುಖಂಡರು ಇವನ ಕನಸಿಗೆ ಸಾಥ್ ನೀಡಿ, ಸ್ಥಳೀಯ ರಾಜಕಾರಣಿಯೊಬ್ಬರ ಬೆಂಬಲ ಪಡೆದು ನೆಲ ತೋಡಲು ಆರಂಭಿಸಿದ್ದಾರೆ.
ಮೊದಲಿಗೆ ೧೦ ಅಡಿ ಆಳದಲ್ಲಿದೆ ಎಂದು ಹೇಳಿದ್ದರಿಂದ, ಅಷ್ಟೇ ನೆಲ ಬಗೆದಿದ್ದಾರೆ. ಅಲ್ಲಿ ಏನೂ ಸಿಕ್ಕಿಲ್ಲ. ಅನಂತರ ಇನ್ನೂ ಐದು ಅಡಿ ಕೆಳಕ್ಕೆ ಹೋಗುವಂತೆ ಹೇಳಿದ್ದಾನೆ. ಮತ್ತೂ ಸಿಕ್ಕಿಲ್ಲ. ಇನ್ನೂ ಎರಡು ಅಡಿ ತೋಡಲು ಹೇಳಿದ್ದಾನೆ. ಆಗ ಗ್ರಾಮಸ್ಥರಿಗೆ ಸಿಟ್ಟು ಬಂದಿದೆ. ಇನ್ನು ಸ್ವಲ್ಪ ಕೆಳಗೆ ತೋಡಿದರೆ, ಬಾವಿಯೇ ತೋಡಿದಂತಾಗುತ್ತದೆ ಎಂದಿದ್ದಾರೆ. ಯುವಕನ ಕನಸು ಈಡೇರಿಸಲು ಹೋಗಿ, ವಾರಂಗಲ್-ಹೈದರಾಬಾದ್ ನಡುವಿನ ಈ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೋಜ್ ಮತ್ತು ಸ್ಥಳೀಯ ರಾಜಕೀಯ ಪುಢಾರಿಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಇವರ ವಿರುದ್ಧ ಅಕ್ರಮವಾಗಿ ರಸ್ತೆ ಅಗೆದ ಆರೋಪ ಹೊರಿಸಲಾಗಿದೆ. ಆದರೆ ಈ ತನಕ ಯಾರ ಮೇಲೂ ಎಫ್‌ಐ‌ಆರ್ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ.

Related posts

Leave a Reply