
ಕುಂದಾಪುರದ ಹಕ್ಲಾಡಿ ಗ್ರಾ.ಪಂ ವ್ಯಾಪ್ತಿಯ ತೊಪ್ಲು ಒಂದನೇ ವಾರ್ಡ್ನ ಗ್ರಾ.ಪಂ ಸದಸ್ಯ ಬಸವ ಪಿ ಮೊಗವೀರ ಅವರಿಗೆ ಅಧ್ಯಕ್ಷ ಸ್ಥಾನ ಕೊಡದೆ ನಿರಾಕರಿಸಿದ ಬಗ್ಗೆ ಅವರ ಬೆಂಬಲಿಗರು ತೊಪ್ಲು ಅರೆಕಲ್ಲು ಶ್ರೀ ನಾಗ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿ ಬಿಜೆಪಿ ಮುಖಂಡರ ವಿರುದ್ದ ಆಕ್ರೋಶ ಹೊರಹಾಕಿದರು.
ಮೀಸಲಾತಿ ಪ್ರಕಟವಾದ ದಿನದಿಂದಲೂ ನಾವು ಪಕ್ಷದ ಮುಖಂಡರಲ್ಲಿ ಬಸವ ಪಿ ಮೊಗವೀರ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ನಿಷ್ಠಾವಂತ ಕಾರ್ಯಕರ್ತರ ಮನವಿಗೆ ಕಿವಿ ಕೊಡದ ಮುಖಂಡರು ಬೇರೆಯವರಿಗೆ ಮಣೆ ಹಾಕಿದ್ದಾರೆ. ನಮ್ಮ ವಾರ್ಡ್ಗೆ ಅಧ್ಯಕ್ಷ ಸ್ಥಾನ ಕೊಡದ ಬಿಜೆಪಿಯ ವಿರುದ್ದ ನಾವೆಲ್ಲರೂ ತಟಸ್ಥ ನೀತಿಯನ್ನು ಅನುಸರಿಸುತ್ತೇವೆ. ಪಕ್ಷದ ಏಕಪಕ್ಷೀಯ ನಿರ್ಧಾರಗಳಿಂದಾಗಿ ಮನನೊಂದಿದೆ. ಇನ್ನು ಮುಂದೆ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ನಾವು ಭಾಗವಹಿಸುವುದಿಲ್ಲ. ಅಲ್ಲದೇ ಮುಂದಿನ ತಾ.ಪಂ, ಜಿ.ಪಂ, ವಿಧಾನಸಭಾ ಚುನಾವಣೆಯಲ್ಲೂ ನಾವು ಬಿಜೆಪಿಯ ಪರ ಕೆಲಸ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರು ಬಿಜೆಪಿ ವಿರುದ್ದ ಆಕ್ರೋಶ ಹೊರಗೆಡವಿದ್ದಾರೆ.
ಈ ವೇಳೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತೊಪ್ಲು ಮಾತನಾಡಿ ಪಕ್ಷದ ಮುಖಂಡರ ಈ ನಿಲುವುಗಳಿಂದಾಗಿ ಮನನೊಂದು ಕಾರ್ಯಕಾರಿಣಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. ಈ ಸಂದರ್ಭ ಬಿಜೆಪಿಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.