Header Ads
Breaking News

ತ್ಯಾಜ್ಯದ ಕೊಂಪೆಯಾಗಿರುವ ಸಾಮೆತ್ತಡ್ಕ ಪರಿಸರ : ನಿರ್ಮಾಣದ ಹಂತದ ಚಿಣ್ಣರ ಪಾರ್ಕ್ ಬಳಿಯೇ ತ್ಯಾಜ್ಯಗಳ ರಾಶಿ

ಪುತ್ತೂರಿನ ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೇ ಇಲ್ಲ. ಇಷ್ಟಿದ್ದರೂ ಚರಂಡಿ ಸ್ವಚ್ಛವಾಗಿದ್ದರೆ ನೀರು ಸರಾಗವಾಗಿ ಹರಿದುಹೋಗಬಹುದು. ಆದರೆ ಇಲ್ಲಿ ಚರಂಡಿಯುದ್ದಕ್ಕೂ ಕಾಣಸಿಗುವ ತ್ಯಾಜ್ಯಗಳಿಗೆ ಕೊರತೆಯೇನಿಲ್ಲ. ಚರಂಡಿಯುದ್ದಕ್ಕೂ ತ್ಯಾಜ್ಯಗಳ ಸರಮಾಲೆಯೇ ಎದ್ದು ಕಾಣುತ್ತಿದೆ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.

ಇದು ನಗರದ ಸಾಮತ್ತಡ್ಕದಲ್ಲಿ ಉದ್ದೇಶಿತ, ನಿರ್ಮಾಣ ಹಂತದಲ್ಲಿರುವ ಚಿಣ್ಣರ ಪಾರ್ಕ್ ಬಳಿ ರಸ್ತೆ ತ್ಯಾಜ್ಯದ ಕೊಂಪೆಯಾಗಿ ಬೆಳೆದಿರುವುದು. ಪರಿಣಾಮ ನಿತ್ಯ ಸಂಚರಿಸುವವರು ಮೂಗು ಮುಚ್ಚಿಕೊಂಡು ಅತ್ತಿತ್ತ ಹೋಗುವ ಪರಿಸ್ಥಿತಿ ಉಂಟಾಗಿದೆ.

ಈ ತ್ಯಾಜ್ಯ ಹರಡಿರುವ ಜಾಗ ಯೂ ಟರ್ನ್ ಆಕಾರದಲ್ಲಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಆಗದಿದ್ದರೂ ಇದ್ದ ಮಣ್ಣಿನ ಚರಂಡಿಯುದ್ದಕ್ಕೆ ದಿನನಿತ್ಯ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ತ್ಯಾಜ್ಯಗಳನ್ನು ಎಸೆಯುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ರಾತ್ರಿ ಸಮಯದಲ್ಲಿ ನಾಯಿ, ಮುಂತಾದ ಪ್ರಾಣಿಗಳು ತ್ಯಾಜ್ಯಗಳನ್ನು ಎಳೆದಾಡಿ ರಸ್ತೆಯೆಲ್ಲಾ ಪಸರಿಸಿಬಿಟ್ಟಿದೆ.

ಈ ರಸ್ತೆ ಒಂದು ಭಾಗದಿಂದ ಕಲ್ಲಾರೆ ಮೂಲಕ ಮುಖ್ಯ ರಸ್ತೆಯನ್ನು ಸಂಪರ್ಕಿಸಿದರೆ, ಮತ್ತೊಂದೆಡೆ ದರ್ಬೆಯನ್ನು ಸಂಪರ್ಕಿಸುತ್ತದೆ. ಇನ್ನೊಂದೆಡೆ ಪ್ರತಿಷ್ಠಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯನ್ನು ಸಂಪರ್ಕಿಸುತ್ತದೆ. ನೂರಾರು ಮನೆಗಳಿರುವ ಇಲ್ಲಿ ಪ್ರತಿನಿತ್ಯ ಹಲವಾರು ವಾಹನಗಳು ಚಲಿಸುತ್ತದೆ. ಇಲ್ಲಿ ನಗರಸಭೆ ವತಿಯಿಂದ ಇರಿಸಿರುವ ಕಸದ ತೊಟ್ಟಿ ಹರಿದು ಚೂರುಚೂರಾಗಿದ್ದು, ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ದುರ್ನಾತ ಬೀರುತ್ತಿದೆ. ಇಲ್ಲಿ ನಗರಸಭೆ ವತಿಯಿಂದ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದನ್ನೂ ಯಾರೂ ಈ ವರೆಗೆ ನೋಡಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ತ್ಯಾಜ್ಯ ತುಂಬಿದ ಪ್ರದೇಶದ ಸಮೀಪದಲ್ಲೇ ಈಗಾಗಲೇ ನಗರಸಭೆಯ ನಗರೋತ್ಥಾನ ಯೋಜನೆಯಡಿ ಚಿಣ್ಣರ ಪಾರ್ಕ್ ನಿರ್ಮಾಣ ಹಂತದಲ್ಲಿದೆ. ಅದರ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ವಸತಿಗೃಹವಿದೆ. ಇನ್ನೊಂದು ಭಾಗದಲ್ಲಿ ನಾಲ್ಕು ಮಹಡಿಯ ಪೊಲೀಸ್ ವಸತಿಗೃಹ ತಲೆ ಎತ್ತಿ ನಿಂತಿದ್ದು, ಇನ್ನೇನು ಉದ್ಘಾಟನೆ ಹಂತದಲ್ಲಿದೆ. ಇಂತಹಾ ಬಹುತೇಕ ಸರಕಾರಿ ಅಧಿಕಾರಿಗಳ ವಸತಿ ಇರುವ ಜನರು ವಾಸಿಸುವ ಈ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಕುರಿತು ಗಮನಹರಿಸದೇ ಇದ್ದಲ್ಲಿ ಈ ತ್ಯಾಜ್ಯದ ಕೊಂಪೆ ಇವೆಲ್ಲದಕ್ಕೆ ಶೋಭೆ ತರುವುದರಲ್ಲಿ ಸಂಶಯವೇ ಇಲ್ಲ.

ನಗರದ ಸಾಮೆತ್ತಡ್ಕ ಏರಿಯಾ ಪುತ್ತೂರಿನ ಎರಡನೇ ಡಂಪಿಂಗ್ ಯಾರ್ಡ್ ಆಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಆ ರೀತಿ ಕಸವನ್ನು ತಂದು ಈ ನಿರ್ಮಿತ ಚಿಣ್ಣರ ಪಾರ್ಕ್ ಬಳಿ ಎಸೆಯುತ್ತಿದ್ದಾರೆ. ಪರಿಣಾಮ ಪರಿಸರ ದುರ್ನಾತ ಬೀರುತ್ತಿದೆ. ಅಲ್ಲದೆ ಇನ್ನೊಂದ ಕಡೆಯಿಂದ ಸಿಮೆಂಟ್ ಮಿಶ್ರಿತ ಮಣ್ಣನ್ನು ಕೂಡಾ ಇಲ್ಲಿ ತಂದು ಸುರಿಯುತ್ತಿದ್ದಾರೆ. ಈ ರೀತಿ ಕಳೆದ ೧೦-೧೫ ವರ್ಷಗಳಿಂದ ನಡೆಯುತ್ತಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ರವೀಂದ್ರ ಹೆಗ್ಡೆ, ಸಾಮಾಜಿಕ ಕಾರ್ಯಕರ್ತರು, ಸಾಮೆತ್ತಡ್ಕ

ಒಟ್ಟಿನಲ್ಲಿ ಪುತ್ತೂರು ತಾಲೂಕಿನಲ್ಲಿ ಎಲ್ಲೇಂದರಲ್ಲಿ ತ್ಯಾಜ್ಯಗಳ ರಾಶಿ ಎದ್ದು ಕಾಣ್ತಾ ಇದ್ದು, ಇದಕ್ಕೆ ಇನ್ನಾದರೂ ಮುಕ್ತಿ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Related posts

Leave a Reply

Your email address will not be published. Required fields are marked *