Breaking News

ದನ ಮತ್ತು ಮಾನವರ ಮೇಲೆ ದಾಳಿ ಮಾಡಿದ ಚಿರತೆ,  ನಿಂಜೂರುನಲ್ಲಿ ಜನರ ರೋಶಕ್ಕೆ ಪೆಟ್ಟು ತಿಂದು ಸತ್ತ ಚಿರತೆ

ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ಹಸು ಮತ್ತು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ತಾಲೂಕಿನ ನಿಂಜೂರು ಗ್ರಾಮದ ಮಲ್ಲಿಬೆಟ್ಟುವಿನಲ್ಲಿ ಬುಧವಾರ ಮುಂಜಾನೆ ಭವಿಸಿದೆ. ಇದೇ ವೇಳೆ ಸಾರ್ವಜನಿಕರ ರೋಷಕ್ಕೆ ತುತ್ತಾದ ಚಿರತೆ ಸಾವನ್ನಪ್ಪಿದೆ.
ಸ್ಥಳೀಯ ನಿವಾಸಿ ೫೫ರ ಅಲ್ವಿನ್ ಯಾನೆ ವಲೇರಿಯನ್ ಡಿ’ಸೋಜಾ ಚಿರತೆಯಿಂದ ಗಾಯಗೊಂಡ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ದನ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದೆ. ನಿಂಜೂರು ಮಲ್ಲಿಬೆಟ್ಟು ನಿವಾಸಿ ಅಪ್ಪಿ ಪೂಜಾರ್ತಿ ಅವರ ದನದ ಕೊಟ್ಟಿಗೆಯ ಅಟ್ಟದಲ್ಲಿ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗಿನ ಜಾವ ಅವಿತು ಕುಳಿತಿದ್ದ ಚಿರತೆ ದನದ ಮೇಲೆರಗಿತು.
ಅಪ್ಪಿ ಪೂಜಾರಿ ಅವರ ನೆರೆಮನೆಯ ಅಲ್ವಿನ್ ಅವರು ಚಿರತೆಯ ಗರ್ಜನೆ ಕೇಳಿ ಕೊಟ್ಟಿಗೆಯತ್ತ ಧಾವಿಸುವಷ್ಟರಲ್ಲಿ ಚಿರತೆ ದನದ ಮೇಲೆರಗಿತ್ತು. ದನವನ್ನು ರಕ್ಷಿಸಲೆಂದು ಬಂದ ಅವರ ಮೇಲೆಯೂ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತು. ಅಲ್ವಿನ್ ಅಲ್ಲಿಂದ ತಪ್ಪಿಸಿಕೊಂಡು ಹೊರ ಓಡಿದಾಗ ಚಿರತೆಯೂ ಹಿಂಬಾಲಿಸಿತು. ಹೊರಗೆ ಬಂದ ಚಿರತೆ ಅಲ್ಲೇ ಇದ್ದ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ. ಅಷ್ಟರಲ್ಲಿ ಮನೆಯವರ ಬೊಬ್ಬೆ ಕೇಳಿದ ಸ್ಥಳೀಯರೆಲ್ಲ ಧಾವಿಸಿ ಬಂದಿದ್ದರು. ಗಲಿಬಿಲಿಗೊಂಡ ಚಿರತೆ ಅವರ ಮೇಲೆಯೂ ಎರಗಿತು. ಸಾರ್ವಜನಿಕರು ಅನ್ಯ ದಾರಿ ಕಾಣದೆ ಚಿರತೆಯ ಮೇಲೆ ಹಲ್ಲೆ ಮಾಡಿದ್ದರಿಂದ ಅದು ಸಾವನ್ನಪ್ಪಿತು. ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕಾಗಮಿಸಿ ಚಿರತೆಯ ಮೃತ ದೇಹವನ್ನು ಕೊಂಡೊಯ್ದಿದ್ದಾರೆ.

Related posts

Leave a Reply