Breaking News

ದಲಿತ ನ್ಯಾಯಮೂರ್ತಿ ಸಿ. ಎಸ್. ಕರ್ಣನ್, ಕೊಯಮುತ್ತೂರು ಬಳಿ ಬಂಧನ

ಕಲ್ಕತ್ತಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರು ತಿಂಗಳು ಶಿಕ್ಷೆ ವಿಧಿಸಿದ ತಿಂಗಳ ಬಳಿಕ ಅವರ ಬಂಧನವಾಗಿದೆ.
ಕೊಯಮತ್ತೂರಿನಿಂದ ಆರು ಕಿಮೀ ದೂರದಲ್ಲಿರುವ ರೆಸಾರ್ಟ್ನಲ್ಲಿ ಪಶ್ಚಿಮ ಬಂಗಾಳ ಪೊಲೀಸರ ತಂಡ ಅವರನ್ನು ವಶಕ್ಕೆ ಪಡೆಯಿತು. ಸೇವೆಯಲ್ಲಿರುವಾಗಲೇ ಶಿಕ್ಷೆಗೆ ಒಳಗಾದ ಹೈಕೋರ್ಟ್ನ ಮೊದಲ ನ್ಯಾಯಮೂರ್ತಿ ಎಂಬ ಖ್ಯಾತಿಗೆ ಕರ್ಣನ್ ಪಾತ್ರರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರೆಸಾರ್ಟ್ನಲ್ಲಿ ತಂಗಿದ್ದ ಕರ್ಣನ್, ಬಂಧನಕ್ಕೆ ಪ್ರತಿರೋಧ ಒಡ್ಡಿದರು ಮತ್ತು ನಮ್ಮೊಂದಿಗೆ ವಾಗ್ವಾದಕ್ಕಿಳಿದರು ಎಂದು ಪೊಲೀಸರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ಮೂರು ತಂಡ ಕರ್ಣನ್ ಅವರ ಬಂಧನಕ್ಕಾಗಿ ತಮಿಳುನಾಡಿನಲ್ಲಿ ಮೊಕ್ಕಾಂ ಹೂಡಿತ್ತು. ಮೊಬೈಲ್ ಕರೆಗಳ ಆಧಾರದಲ್ಲಿ ಅವರು ಇರುವ ಸ್ಥಳ?ಪತ್ತೆ ಮಾಡುವುದು ಪೊಲೀಸರಿಗೆ ಸಾಧ್ಯವಾಯಿತು. ಕರ್ಣನ್ ಅವರ ಪತ್ತೆಗಾಗಿ ಅಗತ್ಯವಾದ ತಾಂತ್ರಿಕ ನೆರವನ್ನು ಸ್ಥಳೀಯ ಪೊಲೀಸರು ಒದಗಿಸಿದ್ದರು. ಸೇವೆಯಿಂದ ನಿವೃತ್ತರಾಗಿ ಎಂಟು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ. ಶಿಕ್ಷೆಯ ಕಾರಣಕ್ಕೆ ಕರ್ಣನ್ ಅವರು ತಲೆಮರೆಸಿಕೊಂಡಿದ್ದರು. ಹಾಗಾಗಿ ಕಲ್ಕತ್ತಾ ಹೈಕೋರ್ಟ್ನಲ್ಲಿ ಅವರಿಗೆ ವಿದಾಯ ಸಮಾರಂಭವನ್ನೂ ಏರ್ಪಡಿಸಿರಲಿಲ್ಲ.

Related posts

Leave a Reply