Header Ads
Header Ads
Breaking News

ದಲಿತ ಮಹಿಳೆಯಿಂದ ವ್ಯಕ್ತಿಗೆ ಹಲ್ಲೆ ಕೋಟದಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ

ಕುಂದಾಪುರ: ಕೋಟ ಸಂತೆ ಮಾರುಕಟ್ಟೆಯಲ್ಲಿ ದಲಿತ ಮಹಿಳೆಯೋರ್ವಳು ಅಲ್ಲಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೋಟತಟ್ಟು ಪಡುಕೆರೆ ನಿವಾಸಿ ರಾಮ ಚಂದ್ರ ಹಂದೆ ಎನ್ನುವವರು ಕೋಟದ ಸಂತೆ ಮಾರುಕಟ್ಟೆ ಬಳಿ ಟಿವಿ ದುರಸ್ತಿ ಅಂಗಡಿ ಇರಿಸಿಕೊಂಡಿದ್ದು, ಗುರುವಾರ ಕೋಟ ಸಂತೆ ನಡೆಯುತ್ತಿದ್ದ ವೇಳೆ ಅವರ ಅಂಗಡಿಯ ಮುಂಭಾಗ ದಲಿತ ಮಹಿಳೆ ಗಿಳಿಯಾರು ನಿವಾಸಿ ಆರತಿ ತರಕಾರಿ ಅಂಗಡಿ ಇರಿಸಿ ವ್ಯವಹಾರ ನಡೆಸುತ್ತಿದ್ದರು. ಈ ಸಂದರ್ಭ ಅಂಗಡಿ ಬಾಗಿಲು ತೆಗೆಯಲೆಂದು ಬಂದ ರಾಮಚಂದ್ರ ಹಂದೆಯವರು ಆರತಿಯವರಲ್ಲಿ ದಾರಿ ಬಿಡಲು ಮನವಿ ಮಾಡಿದರು. ಇದಕ್ಕೆ ಒಪ್ಪದ ಆಕೆ ರಾಮಚಂದ್ರ ಹಂದೆಯವರನ್ನ ಅವ್ಯಾಚ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಘಟನೆ ಸಂಬಂಧ ಕೋಟ ಠಾಣೆಯಲ್ಲಿ ಆರತಿ ಪ್ರತಿ ದೂರು ನೀಡಿದ್ದು, ಸಂತೆ ಮಾರುಕಟ್ಟೆಯಲ್ಲಿ ತರಕಾರಿ ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ವೇಳೆ ರಾಮಚಂದ್ರ ಹಂದೆಯವರು ಇದು ನನ್ನ ಅಂಗಡಿಗೆ ಹೋಗುವ ದಾರಿ ತರಕಾರಿಯನ್ನ ತೆಗೆದು ಬಿಸಾಡು ಇಲ್ಲವಾದಲ್ಲಿ ತರಕಾರಿಯ ಮೇಲೆ ಬೈಕ್ ಓಡಿಸುತ್ತೇನೆ ಎಂದು ಹೇಳಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.


ಕೋಟದ ಹಿರೇ ಮಹಾಲಿಂಗೇಶ್ವರ ದೇವಳದಲ್ಲಿ ಸಾರ್ವಜನಿಕರು ಸಭೆ ಸೇರಿ ಘಟನೆಯನ್ನ ಖಂಡಿಸಿದ್ದಾರೆ. ರಾಮಚಂದ್ರ ಹಂದೆ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ವಿರುದ್ಧ ಜಾತಿನಿಂದನೆಯ ಸುಳ್ಳು ದೂರನ್ನ ನೀಡಿ ಅವರ ಮಾನಹಾನಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಂಬಂಧ ಶನಿವಾರ ಕೋಟ ಪೇಟೆಯನ್ನ ಎರಡು ಗಂಟೆಗಳ ಕಾಲ ಬಂದ್ ಮಾಡಿ ಘಟನೆಯ ವಿರುದ್ಧ ಕೋಟ ಆರಕ್ಷಕ ಠಾಣೆಯ ಮುಂದೆ ಮೌನ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈ‌ಎಸ್‌ಪಿ ಕುಮಾರಸ್ವಾಮಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ.

ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ