Header Ads
Breaking News

ದೇರಳಕಟ್ಟೆಯಲ್ಲಿ ಅಟೋ ಮೊಬೈಲ್ ಅಂಗಡಿಗೆ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ

ಉಳ್ಳಾಲ: ಅಟೋ ಮೊಬೈಲ್ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಇಂದು ಮುಂಜಾನೆ ದೇರಳಕಟ್ಟೆಯಲ್ಲಿ ನಡೆದಿದೆ. ದೇರಳಕಟ್ಟೆಯ ವಿದ್ಯಾರತ್ನ ಕ್ರಾಸ್ ಎಂಬಲ್ಲಿರುವ ಭಾರತ್ ಅಟೋ ಮೊಬೈಲ್ ಅಂಗಡಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಎರಡು ದಿನಗಳ ಹಿಂದಷ್ಟೇ ಪೌರತ್ವ ಪ್ರತಿಭಟನೆಗೆ ತರಲಾಗಿದ್ದ ಲಾರಿ ಹಾಗೂ ಅದರಲ್ಲಿದ್ದ ಕುರ್ಚಿಗಳಿಗೆ ಬೆಂಕಿ ಹಾಕಲಾಗಿತ್ತು. ಆ ಘಟನೆಯಲ್ಲಿ ಕುರ್ಚಿ ಸಹಿತ ಸಂಪೂರ್ಣ ಲಾರಿ ಸುಟ್ಟು ಕರಕಲಾಗಿತ್ತು. ಇದೀಗ ಮಂಜೇಶ್ವರ ನಿವಾಸಿ ಸುರೇಶ್ ಎಂಬವರಿಗೆ ಸೇರಿದ ಭಾರತ್ ಆಟೊಮೊಬೈಲ್ಸ್ ಸ್ಪೇರ್ ಪಾಟ್ರ್ಸ್ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ತಡರಾತ್ರಿ 2.30 ಸುಮಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಂಗಡಿ ಇರುವ ಮೇಲಿನ ಮಹಡಿಯಲ್ಲಿ ಮನೆಯಿದ್ದು, ಬೆಂಕಿ ಕಾವು ಹೆಚ್ಚುತ್ತಿದ್ದಂತೆ ಮನೆಮಂದಿ ಮನೆಯಿಂದ ಹೊರ ಓಡಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿದರು. ಗಲಭೆ ನಡೆಸುವ ಉದ್ದೇಶದಿಂದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಜನತೆ ಯಾವುದೇ ಗೊಂದಲ, ಅಪ್ರಪಚಾರಗಳಿಗೆ ಕಿವಿಗೊಡಬಾರದು. ಪೊಲೀಸ್ ಇಲಾಖೆ ಕೂಡಲೇ ತನಿಖೆ ನಡೆಸಿ ಎರಡು ಘಟನೆಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದರು.

ದುಷ್ಕರ್ಮಿಗಳು ಅಂಗಡಿಯ ಶಟರ್ ಬಾಗಿಲನ್ನು ಕಬ್ಬಿಣದ ರಾಡ್ ಮೂಲಕ ಮೇಲೆತ್ತಿ, ಒಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸ್ಥಳದಲ್ಲಿ ಗಸ್ತಿಗೆ ಬಂದ ಪೊಲೀಸರು ಅಂಗಡಿಯಲ್ಲಿ ಬೆಂಕಿ ಉರಿಯುವುದನ್ನು ಕಂಡು ಕೂಡಲೇ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *