Header Ads
Header Ads
Breaking News

ದ. ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ,  ರೈತ ಸಭೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್

ವಿಶೇಷ ಆರ್ಥಿಕ ವಲಯದ ಮಾದರಿಯಲ್ಲೇ ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ ತಿಳಿಸಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳಿಗೆ ಹಾಗೂ ಹೂವುಗಳಿಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ವಿಶೇಷ ಕೃಷಿ ವಲಯ ಸ್ಥಾಪನೆಯ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ವರದಿ ನೀಡಲು ಅಧಿಕಾರಿಗಳು, ಕೃಷಿ ತಜ್ಞರು ಮತ್ತು ರೈತ ಮುಖಂಡರ ಸಮಿತಿ ರಚಿಸಲಾಗುತ್ತಿದ್ದು, ಈ ಸಮಿತಿ ಎರಡು ತಿಂಗಳಲ್ಲಿ ವರದಿ ನೀಡಲಿದೆ. ಕೃಷಿ ವಲಯಕ್ಕೆ ಅಗತ್ಯವಿರು ವಷ್ಟು ಸೂಕ್ತ ಭೂಮಿ ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ತಿಳಿಸಿದರು. ಯಶಸ್ವಿನಿ ಯೋಜನೆಯಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತಲೂ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಯಶಸ್ವಿನಿ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು.
ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಜಿಲ್ಲಾಮಟ್ಟದ ಕಾರ್ಯಾಗಾರ ವನ್ನು ಶೀಘ್ರವೇ ಆಯೋಜಿಸಲಾಗು ವುದು. ಬೆಳೆಗಳಿಗೆ ಹಳದಿ ರೋಗದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಸುಳ್ಯದಲ್ಲಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲೂ ರೈತ ಮುಖಂಡರ ಸಭೆ ನಡೆಸಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ಹೆಚ್ಚಿಸಲು ಸುಮಾರು ರೂ. ೬೯ ಕೋಟಿ ವೆಚ್ಚದಲ್ಲಿ ೫೩ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೧ ಸಾವಿರ ಸಣ್ಣ ಅಣೆಕಟ್ಟು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ೩ ಗ್ರಾಮ ಪಂಚಾಯಿತಿಗೆ ಒಂದರಂತೆ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್. ಆರ್. ಉಮೇಶ್, ಪುತ್ತೂರು ಉಪ ವಿಭಾಗಾಧಿಕಾರಿ ಡಾ. ರಘುನಂದನ ಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್. ಆರ್. ಯೋಗೀಶ್, ಪಶುಸಂಗೋಪನೆ ಉಪನಿರ್ದೇಶಕ ತಿಪ್ಪೇಸ್ವಾಮಿ, ಸಹಕಾರ ಇಲಾಖೆ ಉಪ ಬಂಧಕ ಬಿ. ಕೆ. ಸಲೀಂ, ಲೀಡ್ ಬ್ಯಾಂಕ್ ಅಧಿಕಾರಿಗಳು, ರೈತ ಮುಖಂಡರಾದ ರವಿಕಿರಣ ಪುಣಚ, ಸಂಪತ್ ಸಾಮ್ರಾಜ್ಯ, ಯಾದವ ಶೆಟ್ಟಿ, ವಿವಿಧ ರೈತ ಸಂಘಟ ನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Related posts

Leave a Reply