Header Ads
Header Ads
Breaking News

ದ.ಕ. ಜಿಲ್ಲೆಯಲ್ಲಿ ಸ್ಥಳೀಯಾಡಳಿ ಸುಧಾರಣೆಯಾಗಿದೆ: ಪೌರಾಡಳಿತ ಸಚಿವ ಈಶ್ಚರ ಖಂಡ್ರೆ ಹೇಳಿಕೆ

ಬಂಟ್ವಾಳ: ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲೆಯಲ್ಲಿ ಸ್ಥಳೀಯಾಡಳಿತಗಳು ಬಹಳಷ್ಟು ಸುಧಾರಣೆಯನ್ನು ಕಂಡಿದೆ, ಸ್ವಂತ ಕಟ್ಟಡ ಹೊಂದಿ ಜನರಿಗೆ ಉತ್ತಮವಾದ ಸೇವೆಯನ್ನು ನೀಡುವುದರ ಮೂಲಕ ಇಲಾಖೆಯ ಮೂಲ ಉದ್ದೇಶವಾದ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, ತ್ಯಾಜ್ಯ ವಿಲೇವಾರಿ, ಬೀದಿದೀಪ ಮೊದಲಾದ ಸೌಲಭ್ಯಗಳನ್ನು ಶಿಸ್ತುಬದ್ದವಾಗಿ ಜನರಿಗೆ ಒದಗಿಸಲಾಗಿದೆ ಎಂದು ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಮಂಗಳವಾರ ಸಂಜೆ ಬಂಟ್ವಾಳ ಪುರಸಭೆಗೆ ಭೇಟಿ ನೀಡಿದ ಅವರು ಇಲ್ಲಿನ ಅಭಿವೃದ್ದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಭಾಗದಲ್ಲಿ ವಾಸಿಸುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ನಗರದಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದು ಯೋಜನಾಬದ್ದವಾಗಿ ಶಾಶ್ವತ ಪರಿಹಾರ ಕಂಡು ಹಿಡಿಯಲು ಸರಕಾರ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ೨೬೫ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆಗಳ ಅಭಿವೃದ್ದಿಗೆ ೨೮೫೦ ಕೋಟಿ ರುಪಾಯಿ ಮೊತ್ತವನ್ನು ನಗರೋತ್ಥಾನ ೩ ಯೋಜನೆಯಡಿ ಅನುದಾನ ಮಂಜೂರುಗೊಳಿಸಿ, ಆಡಳಿತಾತ್ಮಕ ಅನುಮೋದನೆ ಪಡೆದು ಮುಂದಿನ ಆ.೧೯ರಂದು ಚಾಲನೆ ಕೊಡಲಿದ್ದಾರೆ. ದ.ಕ. ಜಿಲ್ಲೆಗೂ ೮೧ ಕೋಟಿ ರುಪಾಯಿ ಅನುದಾನವನ್ನು ನಗರೋತ್ಥಾನ ಯೋಜನೆಯಡಿ ನೀಡಲಾಗಿದೆ ಎಂದು ತಿಳಿಸಿದರು.

ಬಯಲು ಶೌಚ ಮುಕ್ತ ಪುರಸಭೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನ ನೀಡುತ್ತೇವೆ, ಒಳಚರಂಡಿ ನಿರ್ಮಾಣದಿಂದ ಹಾನಿಗೀಡಾಗಿರುವ ರಸ್ತೆಗಳ ದುರಸ್ತಗೆ ಅನುದಾನ ನೀಡುತ್ತೇವೆ, ಕಂಚಿನಡ್ಕ ಪದವಿನಲ್ಲಿ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದ ಸಚಿವ ಖಂಡ್ರೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದೆಜೇಗೇರಿಸ ಬೇಕೆನ್ನುವ ಪ್ರಸ್ತಾಪಕ್ಕೆ ಕ್ಯಾಬಿನೆಟ್ ತೀರ್ಮಾನದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಂಟ್ವಾಳ ಪುರಸಭೆಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ವಿವಿಧ ಯೋಜನೆಗಳಡಿ ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಅವರಲ್ಲಿ ಮನವಿ ಮಾಡಿಕೊಂಡರು. ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಯೋಜನಾ ನಿರ್ದೇಶಕ ಪ್ರಸನ್ನ, ಮುಖ್ಯಾಧಿಕಾರಿ ಸುಧಾಕರ್, ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply